ADVERTISEMENT

ಏಕ ಬ್ರಾಂಡ್ ವಹಿವಾಟು: ಶೇ 100ರಷ್ಟು ಎಫ್‌ಡಿಐ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ನವದೆಹಲಿ (ಪಿಟಿಐ): ಒಂದೇ ಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

`ಎಫ್‌ಡಿಐ~ ಮೇಲಿನ ಗರಿಷ್ಠ ಮಿತಿಯನ್ನು ಸದ್ಯದ ಶೇ 51ರಿಂದ ಶೇ 100ಕ್ಕೆ ಹೆಚ್ಚಿಸಿರುವ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬರಲಿದೆ. ಸರಕುಗಳ ವಿತರಣೆ ಅಥವಾ ಮಾರಾಟ ವಹಿವಾಟು ನಡೆಸುವ ಸಂಸ್ಥೆಯೊಂದು ನಿರ್ದಿಷ್ಟ ಉತ್ಪನ್ನವೊಂದನ್ನು ಸೃಷ್ಟಿಸಿ ಅದರ ಒಡೆತನ ಹೊಂದಿರುವುದರ ಜತೆಗೆ ಅದನ್ನು ಎಲ್ಲೆಡೆ ಸ್ವತಃ ತಾನೇ ಮಾರಾಟ ಮಾಡುವುದಕ್ಕೆ ಏಕ ಬ್ರಾಂಡ್ ಚಿಲ್ಲರೆ ವಹಿವಾಟು ಎನ್ನುವರು. ಬಹುರಾಷ್ಟ್ರೀಯ ಜನಪ್ರಿಯ ಬ್ರಾಂಡ್‌ಗಳು ಅಂತರರಾಷ್ಟ್ರೀಯವಾಗಿ ಮಾರಾಟ ಮಾಡುವ  ಬ್ರಾಂಡ್ ಹೆಸರಿನಲ್ಲಿಯೇ ಭಾರತದಲ್ಲಿಯೂ  ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗುತ್ತದೆ.

ಫ್ಯಾಷನ್ ಬ್ರಾಂಡ್‌ಗಳು ಅದರಲ್ಲೂ ವಿಶೇಷವಾಗಿ ಇಟಲಿ ಮತ್ತು ಫ್ರಾನ್ಸ್‌ನ ಬ್ರಾಂಡ್‌ಗಳು ಭಾರತದ ಮಾರುಕಟ್ಟೆಯಲ್ಲಿ ತಮ್ಮ ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ಈಗ ಅವಕಾಶ ದೊರೆಯಲಿದೆ.ದೇಶಿ ಸಂಸ್ಥೆಗಳು ಜಾಗತಿಕ ವಿನ್ಯಾಸ, ತಂತ್ರಜ್ಞಾನ ಮತ್ತು ನಿರ್ವಹಣಾ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡು  ತಮ್ಮ ಸ್ಪರ್ಧಾತ್ಮಕತೆ ಹೆಚ್ಚಿಸಲೂ ಇದರಿಂದ ಸಾಧ್ಯವಾಗಲಿದೆ. ಈ ನಿರ್ಧಾರದ ಫಲವಾಗಿ ದೇಶಿ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಲಿದೆ. ಗ್ರಾಹಕರಿಗೆ ಸರಕುಗಳ ಖರೀದಿ ಆಯ್ಕೆಯ ಅವಕಾಶಗಳನ್ನೂ ಹೆಚ್ಚಿಸಲಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಅಡಿದಾಸ್ ಸೇರಿದಂತೆ ವಿವಿಧ  ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದಲ್ಲಿನ ತಮ್ಮ ವಹಿವಾಟಿನಲ್ಲಿ ಪೂರ್ಣ ಪ್ರಮಾಣದ ಮಾಲೀಕತ್ವ ಹೊಂದಬಹುದಾಗಿದೆ.ಸದ್ಯಕ್ಕೆ ಒಂದೇ ಬ್ರಾಂಡ್‌ನ ಚಿಲ್ಲರೆ ವಹಿವಾಟಿನಲ್ಲಿ ಶೇ 51ರಷ್ಟು `ಎಫ್‌ಡಿಐ~ಗೆ ಅವಕಾಶ ಲಭ್ಯ ಇದೆ.

 ಶೇ 51ಕ್ಕಿಂತ ಹೆಚ್ಚಿನ `ಎಫ್‌ಡಿಐ~ಗೆ ಅನ್ವಯಿಸುವ ನಿಬಂಧನೆ ಪ್ರಕಾರ, ಕನಿಷ್ಠ ಶೇ 30ರಷ್ಟು ಸರಕುಗಳನ್ನು ದೇಶಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಂದ ಖರೀದಿಸುವುದು ಕಡ್ಡಾಯವಾಗಿರಲಿದೆ.ಇದರಿಂದ ದೇಶಿ ತಯಾರಿಕಾ ಸಂಸ್ಥೆಗಳ ಮೌಲ್ಯವರ್ಧನೆಯಾಗಲಿದ್ದು, ಸಣ್ಣ ಕೈಗಾರಿಕೆಗಳು ಮೇಲ್ದರ್ಜೆಗೆ ಏರಲು ಸಹಾಯವಾಗಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಒಂದೇ ಬ್ರಾಂಡ್‌ನ ಚಿಲ್ಲರೆ ವಹಿವಾಟಿನಲ್ಲಿ `ಎಫ್‌ಡಿಐ~ ಹೆಚ್ಚಿಸುವ ಬಗ್ಗೆ ಕೇಂದ್ರ ಸಚಿವ ಸಂಪುಟವು ಕಳೆದ ವರ್ಷದ ನವೆಂಬರ್ ತಿಂಗಳ 24ರಂದು ನಿರ್ಧಾರ ಕೈಗೊಂಡಿತ್ತು.ಬಹು ಬ್ರಾಂಡ್‌ನ ಚಿಲ್ಲರೆ ವಹಿವಾಟಿನಲ್ಲಿಯೂ ಸಾಗರೋತ್ತರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವ ವಿವಾದಾತ್ಮಕ ನಿರ್ಧಾರವನ್ನೂ ಸರ್ಕಾರ ಅದೇ ಸಂದರ್ಭದಲ್ಲಿ ಕೈಗೊಂಡಿತ್ತು. ಆದರೆ, ರಾಜಕೀಯ ಪಕ್ಷಗಳ ತೀವ್ರ ವಿರೋಧದ ಕಾರಣಕ್ಕೆ ಈ ನಿರ್ಧಾರ ಕೈಬಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.