ADVERTISEMENT

ಏಲಕ್ಕಿ: ಕೆ.ಜಿ.ಗೆ ರೂ 2 ಸಾವಿರ?

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST
ಏಲಕ್ಕಿ: ಕೆ.ಜಿ.ಗೆ ರೂ 2 ಸಾವಿರ?
ಏಲಕ್ಕಿ: ಕೆ.ಜಿ.ಗೆ ರೂ 2 ಸಾವಿರ?   

ಮುಂಬೈ(ಪಿಟಿಐ): ಏಲಕ್ಕಿ ಬೆಲೆ ಶೀಘ್ರದಲ್ಲೇ ಕೆ.ಜಿ.ಗೆ ರೂ2 ಸಾವಿರ ದಾಟುವ ನಿರೀಕ್ಷೆ ಇದೆ!.
 ಕೇರಳದಲ್ಲಿ ಹವಾಮಾನ ವೈಪರೀತ್ಯದಿಂದ ದೊಡ್ಡ ಪ್ರಮಾಣದಲ್ಲಿ ಏಲಕ್ಕಿ ಬೆಳೆ ನಾಶವಾಗಿದೆ. ಈ ನಡುವೆ ಏಲಕ್ಕಿ ರಫ್ತು  ಬೇಡಿಕೆ ದುಪ್ಪಟ್ಟಾಗಿದೆ. ಇವು ಏಲಕ್ಕಿ ಬೆಲೆ ದಿಢೀರ್ ಹೆಚ್ಚಲು ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ಸದ್ಯ ಏಲಕ್ಕಿ ಕೆ.ಜಿ.ಗೆ ರೂ1,185 ಬೆಲೆ ಇದೆ. ಮುಂದಿನ ಏಲಕ್ಕಿ ಸೀಸನ್ (ಏಪ್ರಿಲ್) ಪ್ರಾರಂಭವಾಗುವ ಮೊದಲೇ ಧಾರಣೆ ಇನ್ನೂ ಹೆಚ್ಚಲಿದೆ ಎನ್ನುತ್ತಾರೆ ಮುಂಬೈ ಮೂಲದ ಏಲಕ್ಕಿ ವ್ಯಾಪಾರಿ ದಿನೇಶ್ ಗುಪ್ತಾ.ಪ್ರಪಂಚದಲ್ಲಿಯೇ ಅತಿ ಹೆಚ್ಚು ಏಲಕ್ಕಿ ಬೆಳೆಯುವ (ಶೇ 60ರಷ್ಟು) ಗ್ವಾಟೆಮಾಲಾದಲ್ಲಿ ಈ ಬಾರಿ ಉತ್ಪಾದನೆ ಕುಸಿದಿದೆ.

ಇದರಿಂದ ದೇಶೀಯ ಏಲಕ್ಕಿಗೆ ರಫ್ತು ಬೇಡಿಕೆ ಹೆಚ್ಚಿದೆ. ಆದರೆ, ವಾಸ್ತವದಲ್ಲಿ ದೇಶೀಯ ಬೇಡಿಕೆಯನ್ನೇ ಪೂರೈಸುವಷ್ಟು ಉತ್ಪಾದನೆ ಈ ಬಾರಿ ಆಗಿಲ್ಲ. ದೇಶದಲ್ಲಿ ಅತಿ ಹೆಚ್ಚು ಏಲಕ್ಕಿ ಬೆಳೆಯುವ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಈ ಬಾರಿ ಅಕಾಲಿಕ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದ ಇಳುವರಿ ಶೇ 40ರಷ್ಟು ಕುಸಿದಿದೆ ಎನ್ನುವುದರತ್ತ ಗಮನ ಸೆಳೆಯುತ್ತವೆ ಕೇಂದ್ರ ಸಂಬಾರ ಮಂಡಳಿ ಅಂಕಿ ಅಂಶಗಳು.

ರಫ್ತು ಗುಣಮಟ್ಟ ಹೊಂದಿರುವ ಏಲಕ್ಕಿ ತಳಿ ಸದ್ಯ ಸ್ಥಳೀಯ ಮಾರುಕಟ್ಟೆಯಲ್ಲಿ ರೂ1,070ರಿಂದ ರೂ1,200ರ ನಡುವೆ ವಹಿವಾಟಾಗುತ್ತಿದೆ. ಕಳೆದೆರಡು ವಾರಗಳ ಹಿಂದೆ ಬೆಲೆ ರೂ1,350ಕ್ಕೆ ಏರಿಕೆ ಕಂಡಿತ್ತು. ಗುಣಮಟ್ಟ ಹೊಂದಿರುವ ಏಲಕ್ಕಿ ದಾಸ್ತಾನು ಕಡಿಮೆ ಇರುವುದರಿಂದ ಬೆಲೆ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಾರೆ ವರ್ತಕರು.  
ಸಾಮಾನ್ಯವಾಗಿ ಏಲಕ್ಕಿ ಕೊಯ್ಲು ಪ್ರತಿ ವರ್ಷ ಜುಲೈನಲ್ಲಿ ಪ್ರಾರಂಭವಾಗುತ್ತದೆ. 

ಇಳುವರಿಗಿಂತ ಮುಂಚೆ ಈ ಬಾರಿ ನಾಲ್ಕು ತಿಂಗಳು ಮಳೆಯೇ ಆಗಿಲ್ಲ. ಇದರಿಂದ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳದ ಬೆಳೆಗಾರರ ಏಲಕ್ಕಿ ಪೂರ್ಣ ನಾಶವಾಗಿದೆ ಎನ್ನುತ್ತಾ ಬೇಸರ ವ್ಯಕ್ತಪಡಿಸುತ್ತಾರೆ `ಏಲಕ್ಕಿ ಬೆಳೆಗಾರರ ಒಕ್ಕೂಟ~ದ ಅಧ್ಯಕ್ಷ ಸುಬ್ರಮಣಿಯನ್.

ಈ ಬಾರಿ ಕೇವಲ 9 ಸಾವಿರ ಟನ್‌ಏಲಕ್ಕಿ ಉತ್ಪಾದನೆ ನಿರೀಕ್ಷಿಸಲಾಗಿದೆ. ಆದರೆ, 2011-12ನೇ ಸಾಲಿನ ಮೊದಲ ಏಳು ತಿಂಗಳಲ್ಲೇ ರಫ್ತು ವಹಿವಾಟು ಸಾರ್ವಕಾಲಿಕ ದಾಖಲೆ ಮಟ್ಟವಾದ 4 ಸಾವಿರ ಟನ್‌ಗಳಿಗೆ ಏರಿಕೆಯಾಗಿತ್ತು ಎನ್ನುತ್ತಾರೆ ರಫ್ತು ವ್ಯಾಪಾರಿ ನೋಬಿ ಜೋಸ್.ವರ್ಷಾಂತ್ಯಕ್ಕೆ ರಫ್ತು 6 ಸಾವಿರ ಟನ್ ದಾಟಲಿದೆ ಎನ್ನುವ ವಿಶ್ವಾಸ ಅವರದು. ದೇಶದಿಂದ ಮುಖ್ಯವಾಗಿ ಕೊಲ್ಲಿ ರಾಷ್ಟ್ರಗಳಿಗೆ ಏಲಕ್ಕಿ ರಫ್ತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.