ADVERTISEMENT

ಐ.ಟಿ ರಿಟರ್ನ್ಸ್: ತಪ್ಪು ಸಣ್ಣದೇ ಇದ್ದರೂ ಮರುಪಾವತಿ ವಿಳಂಬ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 19:30 IST
Last Updated 23 ಜುಲೈ 2012, 19:30 IST

ನವದೆಹಲಿ (ಐಎಎನ್‌ಎಸ್): ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಮಾಡುವ ಸಣ್ಣ ತಪ್ಪು  ತೆರಿಗೆ ಮರು ಪಾವತಿ ವಿಳಂಬವಾಗುವುದಕ್ಕೆ ಪ್ರಮುಖ ಕಾರಣವಾಗುತ್ತದೆ ಎನ್ನುತ್ತದೆ ಇತ್ತೀಚಿನ ಅಧ್ಯಯನವೊಂದು.

ಅನೇಕರು ರಿಟರ್ನ್ಸ್ ಸಲ್ಲಿಸುವ ವೇಳೆ ಹಲವು ಸಣ್ಣ ತಪ್ಪುಗಳನ್ನು ಮಾಡಿರುತ್ತಾರೆ. ತಪ್ಪಾದ ರಿಟರ್ನ್ಸ್ ನಮೂನೆ (ಐಟಿಆರ್) ಆಯ್ದುಕೊಳ್ಳುವುದು, ಮನೆ ವಿಳಾಸ ತಪ್ಪಾಗಿ ನೀಡುವುದು, ಬ್ಯಾಂಕ್ ಖಾತೆ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸುವುದರಲ್ಲಿ ಲೋಪ... ಇತ್ಯಾದಿ ತಪ್ಪುಗಳನ್ನು ಮಾಡಿದಲ್ಲಿ ವಾಪಸ್ ಬರಬೇಕಾದ ತೆರಿಗೆ ಮೊತ್ತ 1ರಿಂದ 5 ವರ್ಷಗಳಷ್ಟು ವಿಳಂಬವಾಗಿ ಪಾವತಿಯಾಗುತ್ತದೆ. `ಕಾಗದ~ ರೂಪದಲ್ಲಿ ರಿಟರ್ನ್ ಸಲ್ಲಿಸುವಾಗ ಹೆಚ್ಚಿನ ತಪ್ಪುಗಳಾಗುತ್ತಿವೆ ಎನ್ನುತ್ತದೆ `ಹೊಮಿ ಮಿಸ್ಟ್ರಿ~ ಸಂಸ್ಥೆಯ ವರದಿ.

`ಇ-ಪಾವತಿ~ ವ್ಯವಸ್ಥೆ ರಿಟರ್ನ್ಸ್ ಸಲ್ಲಿಕೆ  ಸರಳಗೊಳಿಸಿದೆ. ಮಾರ್ಚ್ 31ಕ್ಕೆ ಕೊನೆಗೊಂಡ 2012ನೇ ಹಣಕಾಸು ವರ್ಷದಲ್ಲಿ 164.30 ಲಕ್ಷ ಜನರು ಇ-ಪಾವತಿ ಮೂಲಕ (ಶೇ 81.58ರಷ್ಟು ಪ್ರಗತಿ) ರಿಟರ್ನ್ಸ್ ಸಲ್ಲಿಸಿದ್ದಾರೆ. 44 ಲಕ್ಷ ಮಂದಿ ವೇತನದಾರರು ಆನ್‌ಲೈನ್ ಮೂಲಕವೇ ರಿಟರ್ನ್ಸ್ ಸಲ್ಲಿಸಿದ್ದು, ಇದರ ಪ್ರಮಾಣ ಶೇ 124ರಷ್ಟು ಏರಿಕೆ ಕಂಡಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ  (ಸಿಬಿಡಿಟಿ) ಹೇಳಿದೆ.

ವಿದೇಶಿ ಆಸ್ತಿ: ವಿದೇಶದಲ್ಲಿನ ಆಸ್ತಿ ಮಾಹಿತಿಯನ್ನೂ ನಮೂದಿಸಲು ಅನುಕೂಲವಾಗುವಂತೆ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಪ್ರತ್ಯೇಕ ಕಾಲಂ ಸೇರ್ಪಡೆಗೊಳಿಸಲಾಗಿದೆ. 2012-13ರ ಲೆಕ್ಕಚಾರ ವರ್ಷಕ್ಕಾಗಿ ಸಲ್ಲಿಸಲಾಗುವ `ಐಟಿಆರ್~ ಅರ್ಜಿಯಲ್ಲಿ ಈ ಬದಲಾವಣೆ ಮಾಡಲಾಗಿದೆ.

ವಿದೇಶದಲ್ಲಿ ಆಸ್ತಿ, ವಿದೇಶಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವವರು ಅವೆಲ್ಲದರ ವಿಳಾಸ ಮತ್ತು ಕಳೆದ ವರ್ಷ ಖಾತೆಯಲ್ಲಿದ್ದ ಗರಿಷ್ಠ ಶಿಲ್ಕು ಸೇರಿದಂತೆ ಅಗತ್ಯ ಮಾಹಿತಿಗಳನ್ನು ಹೊಸ ಕಾಲಂನಲ್ಲಿ ಭರ್ತಿ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಸೋಮವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.