ADVERTISEMENT

ಐ.ಟಿ ವ್ಯಾಪ್ತಿಗೆ ಶ್ರೀಮಂತ ರೈತರು?

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST
ಐ.ಟಿ ವ್ಯಾಪ್ತಿಗೆ ಶ್ರೀಮಂತ ರೈತರು?
ಐ.ಟಿ ವ್ಯಾಪ್ತಿಗೆ ಶ್ರೀಮಂತ ರೈತರು?   

ನವದೆಹಲಿ (ಪಿಟಿಐ): ಶ್ರೀಮಂತ ರೈತರನ್ನೂ ಆದಾಯ ತೆರಿಗೆ ವ್ಯಾಪ್ತಿಗೆ ತರಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.

ಸದ್ಯಕ್ಕೆ ಕೃಷಿ ವರಮಾನದ ಮೇಲೆ  ಸರ್ಕಾರ ಯಾವುದೇ ತೆರಿಗೆ  ವಿಧಿಸುತ್ತಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಹಲವು ಕಾರ್ಪೋರೇಟ್ ವೃತ್ತಿಪರರು, ಉದ್ಯಮಿಗಳು ಮತ್ತು  ಶ್ರೀಮಂತ ವ್ಯಕ್ತಿಗಳು ದೊಡ್ಡ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.  ಈ ಹಿನ್ನೆಲೆಯಲ್ಲಿ, 20 ಹೆಕ್ಟೇರ್‌ಗಿಂತ ಹೆಚ್ಚಿನ ಇಳುವರಿ ಭೂಮಿ ಹೊಂದಿರುವ ರೈತರಿಗೆ ಆದಾಯ ತೆರಿಗೆ ವಿಧಿಸಬೇಕು ಎಂದು `ಅಸೋಚಾಂ~, ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ಸಲ್ಲಿಸಿರುವ ಬಜೆಟ್ ಪೂರ್ವ ಮನವಿಯಲ್ಲಿ ಆಗ್ರಹಿಸಿದೆ.

ಕೃಷಿ ವರಮಾನದ ಮೇಲೆ  ತೆರಿಗೆ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಬೇಕು. ಇದರಿಂದ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ ವರಮಾನ ಹರಿದು ಬರಲಿದೆ. 20 ಹೆಕ್ಟೇರ್‌ಗಿಂತ ಹೆಚ್ಚಿನ ಇಳುವರಿ ಭೂಮಿ ಹೊಂದಿರುವ ರೈತರಿಗೆ ಒಟ್ಟು ವರಮಾನದ ಶೇ 5ರಷ್ಟು, 20ರಿಂದ 50 ಹೆಕ್ಟೇರ್‌ನಷ್ಟು ಜಮೀನು ಇರುವವರಿಗೆ ಶೇ 10ರಷ್ಟು ತೆರಿಗೆ ವಿಧಿಸಬೇಕು ಎಂದು `ಅಸೋಚಾಂ~ ಅಧ್ಯಕ್ಷ ರಾಜ್‌ಕುಮಾರ್ ದೂತ್ ಸಲಹೆ ಮಾಡಿದ್ದಾರೆ.

ಆದಾಗ್ಯೂ, ದೇಶದ ಶೇ 80ರಿಂದ ಶೇ 90ರಷ್ಟು ರೈತರು ಬಡವರು. ಇವರು ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ. ಶ್ರೀಮಂತ ರೈತರು ಮಾತ್ರ ಈ ವ್ಯಾಪ್ತಿಗೆ ಬರಲಿದ್ದಾರೆ. ಪ್ರತಿ ವರ್ಷ ದೇಶದಲ್ಲಿ ಕೃಷಿ ಕ್ಷೇತ್ರದಿಂದ ಹೆಚ್ಚುವರಿಯಾಗಿ ರೂ20 ಸಾವಿರ ಕೋಟಿ ವರಮಾನ ಸೃಷ್ಟಿಯಾಗುತ್ತಿದೆ. ಆದ್ದರಿಂದ ಈ ವಲಯವನ್ನು ತೆರಿಗೆ ವ್ಯಾಪ್ತಿಗೆ ತರಬೇಕು ಎಂದು  ಹೇಳಿದ್ದಾರೆ.

ರೈತರನ್ನು ತೆರಿಗೆ ವ್ಯಾಪ್ತಿಗೆ ತರುವುದಕ್ಕೆ ರಾಜಕೀಯ ವಿರೋಧವಿದೆ. ಆದರೆ, ದೇಶದ ಆಹಾರ ಭದ್ರತೆ ಮತ್ತು ವರಮಾನ ಸಂಗ್ರಹದ ದೃಷ್ಟಿಯಿಂದ ಸರ್ಕಾರ ಈ ಸಲಹೆ  ಪರಿಗಣಿಸಬೇಕು. ಈಗಾಗಲೇ ಕೃಷಿ ಸಬ್ಸಿಡಿಗೆ ದೊಡ್ಡ ಪ್ರಮಾಣದ ಮೊತ್ತವನ್ನು ಸರ್ಕಾರ ವ್ಯಯಿಸುತ್ತಿದೆ  ಎಂದು `ಅಸೋಚಾಂ~ ಉಪಾಧ್ಯಕ್ಷ ರಾಣಾ ಕಪೂರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.