ADVERTISEMENT

ಐದು ಬ್ಯಾಂಕ್‌ಗಳ ಜತೆ ಒಪ್ಪಂದ

ಬಾಕಿ ಸಂಗ್ರಹ, ಹಣ ಪಾವತಿ ಉದ್ದೇಶಕ್ಕೆ ಇಪಿಎಫ್‌ಒ ಕ್ರಮ

ಪಿಟಿಐ
Published 5 ಜುಲೈ 2017, 19:27 IST
Last Updated 5 ಜುಲೈ 2017, 19:27 IST
ಐದು ಬ್ಯಾಂಕ್‌ಗಳ ಜತೆ ಒಪ್ಪಂದ
ಐದು ಬ್ಯಾಂಕ್‌ಗಳ ಜತೆ ಒಪ್ಪಂದ   

ನವದೆಹಲಿ: ಬಾಕಿ ಸಂಗ್ರಹ ಮತ್ತು ಪಿಂಚಣಿ, ವಿಮೆ ಮತ್ತು  ಹಣ ಪಾವತಿ ಉದ್ದೇಶಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ)  ಐದು ಬ್ಯಾಂಕ್‌ಗಳ ಒಪ್ಪಂದ ಮಾಡಿಕೊಂಡಿದೆ. ಭವಿಷ್ಯ ನಿಧಿ ಸಂಘಟನೆಯ ಸದಸ್ಯರಿಗೆ  ತ್ವರಿತವಾಗಿ ಹಣ ಪಾವತಿಸಲು ಮತ್ತು ಹಣ ಹೂಡಿಕೆ ಪ್ರಕ್ರಿಯೆಗೆ ವೇಗ ನೀಡಲು ಈ ಒಪ್ಪಂದ ನೆರವಾಗಲಿದೆ.

ಬ್ಯಾಂಕ್‌ ಆಫ್‌ ಬರೋಡಾ, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಜತೆಗಿನ ಈ ಒಪ್ಪಂದದ ಫಲವಾಗಿ ಸಂಘಟನೆಗೆ ವರ್ಷಕ್ಕೆ ₹ 125 ಕೋಟಿ ಉಳಿತಾಯ ಆಗಲಿದೆ. ಈ ಬ್ಯಾಂಕ್‌ಗಳ ಗ್ರಾಹಕರು ತಮ್ಮ ಪಿಎಫ್‌ ಬಾಕಿ ಹಣವನ್ನು ‘ಇಪಿಎಫ್‌ಒ’ದ ಖಾತೆಯಲ್ಲಿ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೌಲಭ್ಯದ ಮೂಲಕ ನೇರವಾಗಿ ಪಾವತಿಸಬಹುದಾಗಿದೆ.

‘ವಿವಿಧ ಬ್ಯಾಂಕ್‌ಗಳಲ್ಲಿ ಇರುವ ಸದಸ್ಯರ ಖಾತೆಗಳಿಗೆ ಹಣ ಪಾವತಿಸಲು ವರ್ಷಕ್ಕೆ ₹ 350 ಕೋಟಿಗಳಷ್ಟು ವಹಿವಾಟು ಶುಲ್ಕ ವೆಚ್ಚವಾಗುತ್ತಿತ್ತು.  ಎಸ್‌ಬಿಐ ಜತೆಗೆ, ಪಿಎನ್‌ಬಿ, ಅಲಹಾಬಾದ್‌ ಬ್ಯಾಂಕ್‌,  ಇಂಡಿಯನ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲೂ ಆನ್‌ಲೈನ್‌ನಲ್ಲಿ ಬಾಕಿ ಸಂಗ್ರಹಕ್ಕೆ ಚಾಲನೆ ನೀಡಿದ ನಂತರ ವಹಿವಾಟು ಶುಲ್ಕವು ₹ 175ಕ್ಕೆ ಇಳಿದಿತ್ತು. ಹೊಸದಾಗಿ ಐದು ಬ್ಯಾಂಕ್‌ಗಳ ಜತೆಗಿನ ಇಂದಿನ ಒಪ್ಪಂದದ ಫಲವಾಗಿ ಈ  ವೆಚ್ಚವು ವರ್ಷಕ್ಕೆ ₹ 50 ಕೋಟಿಗೆ ಇಳಿಯಲಿದೆ’ ಎಂದು ಕೇಂದ್ರೀಯ ಭವಿಷ್ಯ ನಿಧಿ ಕಮಿಷನರ್‌ ವಿ. ಪಿ. ಜಾಯ್‌ ತಿಳಿಸಿದ್ದಾರೆ.

ಸಂಘಟನೆಯು ಇನ್ನೂ ಏಳು ಬ್ಯಾಂಕ್‌ಗಳ ಜತೆ ಒಪ್ಪಂದಕ್ಕೆ ಬರಲು ಮಾತುಕತೆ ನಡೆಸುತ್ತಿದೆ.

ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ಹೂಡಿಕೆ: ಸಂಘಟನೆಯು AA+ ಮಾನದಂಡದ ಕಾರ್ಪೊರೇಟ್‌ ಬಾಂಡ್‌ಗಳಲ್ಲಿ  ₹ 3 ಸಾವಿರ ಕೋಟಿಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ.
ಹೂಡಿಕೆ ಮಾಡಬಹುದಾದ ಠೇವಣಿಗಳ ಶೇ 2ರಷ್ಟು ಮೊತ್ತವನ್ನು ಈ ಬಾಂಡ್‌ಗಳಲ್ಲಿ ಹೂಡಲು  ಸಂಘಟನೆಯ ಹಣಕಾಸು, ಲೆಕ್ಕಪತ್ರ ಮತ್ತು ಹೂಡಿಕೆ ಸಮಿತಿ (ಎಫ್‌ಎಐಸಿ) ಅನುಮತಿ ನೀಡಿದೆ. ನಿಯಮಾವಳಿಗಳ ಪ್ರಕಾರ, ಕನಿಷ್ಠ AAA  ಮಾನದಂಡದ ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ಭವಿಷ್ಯ ನಿಧಿ ಸಂಘಟನೆಯು ಹಣ ಹೂಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.