ನವದೆಹಲಿ (ಪಿಟಿಐ): ಜಾಗತಿಕ ಗಾತ್ರದ ಬೃಹತ್ ಬ್ಯಾಂಕ್ ಆಗಿ ರೂಪುಗೊಳ್ಳುವ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಗುರುವಾರ ಇನ್ನೊಂದು ಮಹತ್ವದ ಹೆಜ್ಜೆ ಇರಿಸಿದೆ.
ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ (ಬಿಎಂಬಿಎಲ್) ವಿಲೀನಗೊಳಿಸಿಕೊಳ್ಳಲು ‘ಎಸ್‌ಬಿಐ’ನ ನಿರ್ದೇಶಕ ಮಂಡಳಿಯು ಅನುಮೋದನೆ ನೀಡಿದೆ.
ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಬ್ಯಾಂಕ್‌ಗಳ ಷೇರುಗಳ ವಿನಿಮಯ ಅನುಪಾತವನ್ನೂ ಅನುಮೋದಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ (ಎಸ್‌ಬಿಬಿಜೆ), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ), ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್ (ಎಸ್‌ಬಿಟಿ) ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಲಿಮಿಟೆಡ್‌ಗಳನ್ನು (ಬಿಎಂಬಿಎಲ್) ವಿಲೀನಗೊಳಿಸಿಕೊಳ್ಳಲು ಎಸ್‌ಬಿಐ ನಿರ್ದೇಶಕರ ಕೇಂದ್ರೀಯ ಮಂಡಳಿಯು ಸಮ್ಮತಿ ನೀಡಿದೆ. ಈ ಮಾಹಿತಿಯನ್ನು ಮುಂಬೈ ಷೇರುಪೇಟೆಗೆ ತಿಳಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ಗಳು ಎಸ್‌ಬಿಐನ ಸಂಪೂರ್ಣ ಸ್ವಾಮಿತ್ವಕ್ಕೆ ಒಳಪಟ್ಟಿವೆ. ಈ ಎರಡೂ ಬ್ಯಾಂಕ್‌ಗಳು ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿಲ್ಲ.
ವಿಲೀನ ಪ್ರಸ್ತಾವನೆ ಪ್ರಕಾರ, ‘ಎಸ್‌ಬಿಬಿಜೆ’ ಷೇರುದಾರರು ₹ 10 ಮುಖಬೆಲೆಯ ಪ್ರತಿ 10 ಷೇರುಗಳಿಗೆ ಎಸ್‌ಬಿಐನ (₹ 1 ಮುಖಬೆಲೆ) 28 ಷೇರುಗಳನ್ನು ಪಡೆಯಲಿದ್ದಾರೆ. ಅದೇ ರೀತಿ, ಎಸ್‌ಬಿಎಂ ಮತ್ತು ಎಸ್‌ಬಿಟಿ ಷೇರುದಾರರು ಪ್ರತಿ 10 ಷೇರುಗಳಿಗೆ ಎಸ್‌ಬಿಐನ 22 ಷೇರುಗಳನ್ನು ಪಡೆಯಲಿದ್ದಾರೆ.
‘ಷೇರು ವಿನಿಮಯ ಅನುಪಾತವು ಕಡಿಮೆ ಪ್ರಮಾಣದ ಷೇರುಗಳನ್ನು ಹೊಂದಿರುವವರ ಪರವಾಗಿದೆ. ಇದನ್ನು ಎಲ್ಲ ಷೇರುದಾರರು ಒಪ್ಪಿಕೊಳ್ಳುವ ಸಾಧ್ಯತೆ ಇದೆ’ ಎಂದು ಎಸ್‌ಬಿಐನ ಉಪ ವ್ಯವಸ್ಥಾಪಕ ನಿರ್ದೇಶಕ ನೀರಜ್ ವ್ಯಾಸ್ ಅವರು ಹೇಳಿದ್ದಾರೆ.
ಎಲ್ಲ ಐದು ಸಹವರ್ತಿ ಬ್ಯಾಂಕ್‌ಗಳನ್ನು ಎಸ್‌ಬಿಐನಲ್ಲಿ ವಿಲೀನಗೊಳಿಸಲು ಕೇಂದ್ರ ಸಚಿವ ಸಂಪುಟವು ಈಗಾಗಲೇ ಸಮ್ಮತಿ ನೀಡಿದೆ. ಸಹವರ್ತಿ ಬ್ಯಾಂಕ್‌ಗಳು ಮತ್ತು ಬಿಎಂಬಿಎಲ್‌ನ ವಿಲೀನದ ನಂತರ ಎಸ್‌ಬಿಐ ಜಾಗತಿಕ ಗಾತ್ರದ ಬ್ಯಾಂಕ್ ಆಗಲಿದೆ.
ಮುಂಬೈ ಷೇರುಪೇಟೆಯ ಗುರುವಾರದ ವಹಿವಾಟಿನಲ್ಲಿ ಎಸ್‌ಬಿಬಿಜೆ ಮತ್ತು ಎಸ್‌ಬಿಎಂ ಷೇರುಗಳ ಬೆಲೆಗಳು ಕ್ರಮವಾಗಿ ಶೇ 3.49 ಮತ್ತು ಶೇ 2.06ರಷ್ಟು ಏರಿಕೆ ದಾಖಲಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.