ADVERTISEMENT

ಒಂಬತ್ತು ಲಕ್ಷ ಹೆಕ್ಟೇರ್‌ ಕಡಿಮೆ ಬಿತ್ತನೆ

ಆರಂಭದಲ್ಲಿ ಕೈಕೊಟ್ಟ ಮುಂಗಾರು

ಆರ್‌.ಜೆ.ಯೋಗಿತಾ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜೂನ್, ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗದ ಪರಿಣಾಮ ರಾಜ್ಯದಲ್ಲಿ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತ ಸುಮಾರು 9 ಲಕ್ಷ ಹೆಕ್ಟೇರ್‌ನಷ್ಟು ಕಡಿಮೆಯಾಗಿದೆ.

ಕಳೆದ ವರ್ಷ ಈ ವೇಳೆಗೆ ರಾಜ್ಯದಲ್ಲಿ 69.75 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ವರ್ಷ ಕೇವಲ 60.46 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಒಟ್ಟು 73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಶೇ 80ರಷ್ಟು ಗುರಿ ಸಾಧನೆಯಾಗಿದೆ.

‘ಆರಂಭದಲ್ಲಿ ಮಳೆ ಕೊರತೆ ಉಂಟಾಗಿದ್ದರಿಂದ ಮುಂಗಾರಿನ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ರಾಮನಗರ, ಕೋಲಾರ, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಬಿತ್ತನೆಯಾಗಿದೆ. ಆದರೆ, ವಾಡಿಕೆಯಷ್ಟು ಬಿತ್ತನೆಯಾಗಿಲ್ಲ’ ಎಂದು ಕೃಷಿ ಆಯುಕ್ತ ಜಿ.ಸತೀಶ್‌ ತಿಳಿಸಿದರು.

ADVERTISEMENT

ಹಿಂಗಾರು ಬಿತ್ತನೆ ಹೆಚ್ಚುವ ನಿರೀಕ್ಷೆ:  ‘ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾಗಿದ್ದರಿಂದ ಹಿಂಗಾರು ಬಿತ್ತನೆ ಶೇ 30ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಹಿಂಗಾರು ಬಿತ್ತನೆ ಪ್ರಾರಂಭವಾಗಿದೆ’ ಎಂದರು.

‘ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾಗಿದ್ದು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಬಿತ್ತನೆ ಸುಧಾರಿಸಿದೆ. ಉತ್ತರ ಒಳನಾಡು ಪ್ರದೇಶಗಳಲ್ಲಿ ಆಗಸ್ಟ್‌ಗೆ ಮುಂಗಾರು ಬಿತ್ತನೆ ಅವಧಿ ಮುಕ್ತಾಯವಾಗುತ್ತದೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಆ ಭಾಗದಲ್ಲಿ ಬಿತ್ತನೆ ಹೆಚ್ಚಾಗಿತ್ತು' ಎಂದು ಮೂಲಗಳು ತಿಳಿಸಿವೆ.

ವಾಣಿಜ್ಯ ಬೆಳೆ– ಬಿತ್ತನೆ ಸುಧಾರಣೆ: ‘ಕಳೆದ ವರ್ಷದ ವಾಣಿಜ್ಯ ಬೆಳೆಗಳ ಬಿತ್ತನೆ ಪ್ರಮಾಣಕ್ಕೆ ಹೋಲಿಸಿದರೆ, ಈ ವರ್ಷ ಸುಧಾರಣೆಯಾಗಿದೆ. 2016ರ ಸೆಪ್ಟೆಂಬರ್‌ನಲ್ಲಿ 9.49 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈ ಪ್ರಮಾಣ 9.55 ಲಕ್ಷ ಹೆಕ್ಟೇರ್‌ ಇದೆ. ಆದರೆ, ವಾಡಿಕೆಗಿಂತ 1.82 ಲಕ್ಷ ಹೆಕ್ಟೇರ್‌ ಕಡಿಮೆಯೇ ಇದೆ. ಆಹಾರ ಧಾನ್ಯಗಳು 42.87 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹಾಗೂ ಎಣ್ಣೆಕಾಳುಗಳು 8.04 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ’ ಎಂದು ಕೃಷಿ ಇಲಾಖೆ ತಿಳಿಸಿದೆ.

ತೋಟಗಾರಿಕೆ ಬೆಳೆ ಬಿತ್ತನೆ ಕುಂಠಿತ: ತೋಟಗಾರಿಕೆ ಬೆಳೆಗಳಾದ ಆಲೂಗಡ್ಡೆ, ಈರುಳ್ಳಿ, ಟೊಮೆಟೊ ಕಳೆದ ಸಾಲಿಗಿಂತ ಕಡಿಮೆ ಬಿತ್ತನೆಯಾಗಿದೆ. ಆದರೆ, ಮೆಣಸಿಕಾಯಿ ಬಿತ್ತನೆ ಮಾತ್ರ ಉತ್ತಮವಾಗಿದೆ.

1.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಕೇವಲ 79,276 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ 40ರಷ್ಟು ಕುಂಠಿತವಾಗಿದೆ. ಕಳೆದ ಸಾಲಿನಲ್ಲಿ 16,490 ಹೆಕ್ಟೇರ್‌ನಲ್ಲಿ ಟೊಮೆಟೊ ಬೆಳೆಯಲಾಗಿತ್ತು. ಈ ವರ್ಷ ಕೇವಲ 13,811 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. 17,642 ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗಡ್ಡೆ ಹಾಗೂ 30,352 ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆಯಾಗಿದೆ.

‘ಈರುಳ್ಳಿ ಹೆಚ್ಚಾಗಿ ಬೆಳೆಯುತ್ತಿದ್ದ ಧಾರವಾಡ, ಗದಗ, ಚಿತ್ರದುರ್ಗದಲ್ಲಿ ಮಳೆ ಬಾರದೆ ಉತ್ಪಾದನೆ ಕಡಿಮೆ ಆಗಿದೆ. ಇದರಿಂದ ಮಾರುಕಟ್ಟೆಗೆ ಬರುವ ಈರುಳ್ಳಿ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ’ ಎಂದು ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಸ್‌ ಚಂದ್ರ ರೇ ತಿಳಿಸಿದರು.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.