ADVERTISEMENT

ಒಎನ್‌ಜಿಸಿ ಷೇರು ಹರಾಜು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:30 IST
Last Updated 1 ಮಾರ್ಚ್ 2012, 19:30 IST
ಒಎನ್‌ಜಿಸಿ ಷೇರು ಹರಾಜು
ಒಎನ್‌ಜಿಸಿ ಷೇರು ಹರಾಜು   

ಮುಂಬೈ (ಪಿಟಿಐ): ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿನ (ಒಎನ್‌ಜಿಸಿ) ಕೇಂದ್ರ ಸರ್ಕಾರದ ಪಾಲು ಬಂಡವಾಳದ ಶೇ 5ರಷ್ಟು ಷೇರುಗಳನ್ನು ಗುರುವಾರ  ಹರಾಜು ಹಾಕಲಾಯಿತು.

ಈ ಹರಾಜಿನಲ್ಲಿ 29 ಕೋಟಿಗಳಷ್ಟು ಷೇರುಗಳಿಗೆ ಬೇಡಿಕೆ ವ್ಯಕ್ತವಾಗಿ ರೂ.8,500 ಕೋಟಿಗಳಷ್ಟು ಸಂಗ್ರಹವಾಯಿತು. ಇದು ಸರ್ಕಾರ ನಿಗದಿಪಡಿಸಿರುವ ರೂ.12 ಸಾವಿರ ಕೋಟಿ ಸಂಗ್ರಹದ ಎರಡು ಮೂರಾಂಶದಷ್ಟಿತ್ತು. ಒಂದು ದಿನದ ಈ ಹರಾಜಿನ ಕೊನೆಯಲ್ಲಿ ಮುಂಬೈ ಷೇರುಪೇಟೆ (ಬಿಎಸ್‌ಇ) ಯಲ್ಲಿ 9.3 ಕೋಟಿ ಮತ್ತು ರಾಷ್ಟ್ರೀಯ ಷೇರುಪೇಟೆ (ನಿಫ್ಟಿ)ಯಲ್ಲಿ 19.92 ಕೋಟಿಗಳಷ್ಟು ಷೇರುಗಳಿಗೆ ಬೇಡಿಕೆ ವ್ಯಕ್ತವಾಯಿತು.

ಸರ್ಕಾರವು ಪ್ರತಿ ಷೇರಿಗೆ ರೂ.290ರಂತೆ 42.77 ಕೋಟಿಗಳಷ್ಟು ಷೇರುಗಳನ್ನು ಮಾರಾಟ ಮಾಡಲು ಉದ್ದೇಶಿಸಿತ್ತು. ಅಂತಿಮವಾಗಿ ರೂ.8,500 ಕೋಟಿಗಳಷ್ಟು ಮೊತ್ತಕ್ಕೆ ಬಿಡ್ ಕಂಡುಬಂದಿತು. ಷೇರುಗಳನ್ನು `ಬೆಲೆ ಆದ್ಯತೆ~ ತತ್ವದ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ.
 
ಅಂದರೆ, ಗರಿಷ್ಠ ಬೆಲೆಗೆ ಷೇರುಗಳನ್ನು ಕೊಳ್ಳಲು ಮುಂದೆ ಬಂದವರಿಗೆ (ಬಿಡ್ ಮಾಡಿದವರಿಗೆ) ಷೇರುಗಳನ್ನು ವಿತರಣೆ ಮಾಡಲಾಗಿದೆ. ಪ್ರತಿ ಷೇರಿಗೆ ರೂ.290 ರಿಂದ ರೂ.293ರ ಮಧ್ಯೆ  ಬಿಡ್ ಮಾಡಲಾಗಿದೆ. ಬೆಳಿಗ್ಗೆ 9.15ಕ್ಕೆ ಆರಂಭವಾದ ಈ ಹರಾಜು ಮಧ್ಯಾಹ್ನ 3.30ಕ್ಕೆ ಕೊನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.