ADVERTISEMENT

ಕಪ್ಪುಹಣ ಪಿಡುಗಿಗೆ ಕಡಿವಾಣ: ಆದಾಯ ತೆರಿಗೆ ರಿಟರ್ನ್ ಮೇಲೆ ನಿಗಾ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಕಪ್ಪುಹಣದ ಪಿಡುಗು ನಿಯಂತ್ರಿಸುವ ಸಲುವಾಗಿ ವಿದೇಶಗಳಲ್ಲಿ ಹೊಂದಿರುವ ಆಸ್ತಿಪಾಸ್ತಿಗಳ ಸಂಬಂಧ 16 ವರ್ಷಗಳ ಅವಧಿಯ ಆದಾಯ ತೆರಿಗೆ ರಿಟರ್ನ್‌ನ್ನು ಕೂಲಂಕಷವಾಗಿ ಪರಿಶೀಲಿಸಲು ಸರ್ಕಾರ ನಿರ್ಧರಿಸಿದೆ.

ಹಾಗೆಯೇ ಸ್ಥಿರಾಸ್ಥಿ ವರ್ಗಾವಣೆ ಹಾಗೂ ಚಿನ್ನ ಖರೀದಿ ಮೇಲೆ ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ಮಾಡುವ ಪದ್ಧತಿ ಜಾರಿಗೊಳಿಸಲಿದೆ.

ವಿದೇಶಗಳಲ್ಲಿ ಹೊಂದಿರುವ ಆಸ್ತಿಪಾಸ್ತಿ ಸಂಬಂಧ 16 ವರ್ಷಗಳ ಅವಧಿವರೆಗಿನ ತೆರಿಗೆ ಮೊಕದ್ದಮೆಗಳ ಮರುವಿಚಾರಣೆ ಕೈಗೆತ್ತಿಕೊಳ್ಳಲು ಕೂಡ ಆದಾಯ ತೆರಿಗೆ ಇಲಾಖೆಗೆ ಸರ್ಕಾರ ಅವಕಾಶ ಕಲ್ಪಿಸಿದೆ.

ADVERTISEMENT

ಕೃಷಿ ಭೂಮಿ ಹೊರತುಪಡಿಸಿ ಬೇರೆಲ್ಲಾ ರೀತಿಯ ಸ್ಥಿರಾಸ್ಥಿಗಳ ವರ್ಗಾವಣೆಗೆ ನಿಶ್ಚಿತ ಮಿತಿ ನಿಗದಿ ಮಾಡಿ, ಅದನ್ನು ಮೀರಿದ ಎಲ್ಲಾ ವರ್ಗಾವಣೆಗಳಿಗೆ ಮೂಲದಲ್ಲೇ ತೆರಿಗೆ ಕಡಿತ ಮಾಡಲಾಗುವುದೆಂದು ಪ್ರಣವ್ ಮುಖರ್ಜಿ ತಿಳಿಸಿದ್ದಾರೆ. ತೆರಿಗೆ ವಂಚನೆ ಸ್ಕೀಮ್‌ಗಳನ್ನು ನಿಗ್ರಹಿಸುವ ಸಲುವಾಗಿ ಸಾಮಾನ್ಯ ತೆರಿಗೆ ವಂಚನೆ ಪ್ರತಿರೋಧ ನಿಯಮವನ್ನು (ಜಿಎಎಆರ್) ಜಾರಿಗೆ ತರುವ ಪ್ರಸ್ತಾವ ಹೊಂದಿರುವುದಾಗಿಯೂ ಸಚಿವರು ತಿಳಿಸಿದ್ದಾರೆ.

ಸಂಸತ್ತಿನಲ್ಲಿ ಪ್ರಸಕ್ತ ನಡೆಯುತ್ತಿರುವ ಅಧಿವೇಶನದ ವೇಳೆ ಕಪ್ಪುಹಣದ ಸಂಬಂಧ ಶ್ವೇತಪತ್ರವನ್ನು ಮಂಡಿಸುವ ಪ್ರಸ್ತಾವ ಬಜೆಟ್‌ನಲ್ಲಿದೆ.

ಕಲ್ಲಿದ್ದಲು, ಲಿಗ್ನೈಟ್,  ಕಬ್ಬಿಣದ ಅದಿರು ವ್ಯವಹಾರ ಹಾಗೂ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ  ಚಿನ್ನ ಅಥವಾ ಆಭರಣ ಖರೀದಿ ಮೇಲೆ ಮೂಲದಲ್ಲೇ ತೆರಿಗೆ ಕಡಿತ ಮಾಡಲಾಗುವುದು.

ಖಾಸಗಿ ಕಂಪೆನಿಗಳು ಹಾಗೂ ಖಾಸಗಿ ಸಂಸ್ಥೆಗಳು ತಾವು ಸಂಗ್ರಹಿಸುವ ಷೇರು ಹಣದ ಸಂಬಂಧ ಸರ್ಕಾರಕ್ಕೆ ಇನ್ನು ಮುಂದೆ ಹೆಚ್ಚಿನ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ. ಹಾಗೆಯೇ ಷೇರು ಪ್ರೀಮಿಯಮ್‌ನ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಮೌಲ್ಯದ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.