ADVERTISEMENT

ಕಪ್ಪು ಹಣ: ಸರ್ಕಾರದ ಧೋರಣೆಗೆ ಸುಪ್ರೀಂ ಗರಂ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST

ನವದೆಹಲಿ (ಪಿಟಿಐ): ವಿದೇಶಗಳ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣದ ವಿವರ ಬಹಿರಂಗಪಡಿಸಲು ಹಿಂದೇಟು ಹಾಕುತ್ತಿರುವ ಸರ್ಕಾರದ ಧೋರಣೆಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಇದು ರಾಷ್ಟ್ರದ ಹಣದ ಕಳ್ಳತನವಲ್ಲದೆ ಮತ್ತೇನೂ ಅಲ್ಲ ಎಂದ ನ್ಯಾಯಾಲಯ, ರಾಷ್ಟ್ರದ ಸಂಪತ್ತನ್ನು ವಿದೇಶಗಳಲ್ಲಿ ಇರಿಸುವುದು ಲೂಟಿಗೆ ಸಮ ಎಂದು ಅಭಿಪ್ರಾಯಪಟ್ಟಿತು.

ವಿದೇಶಗಳ ಬ್ಯಾಂಕುಗಳಲ್ಲಿ ಇರಿಸಿರುವ ಹಣವನ್ನು ವಾಪಸು ಪಡೆಯಲು ಕೋರಿ ಕೇಂದ್ರದ ಮಾಜಿ ಕಾನೂನು ಸಚಿವ ರಾಂ ಜೇಠ್ಮಲಾನಿ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ.ಸುದರ್ಶನ ರೆಡ್ಡಿ ಮತ್ತು ಎಸ್.ಎಸ್.ನಿಜ್ಜಾರ್ ಬುಧವಾರ ಹೀಗೆ ಹೇಳಿದರು.

ಜರ್ಮನಿಯ ಲೀಚ್‌ಟೆನ್‌ಸ್ಟೀನ್ ಬ್ಯಾಂಕಿನಲ್ಲಿ 26 ಜನ ಇರಿಸಿರುವ ಹಣದ ವಿವರ ಬಹಿರಂಗಗೊಳಿಸಲು ನಿರಾಕರಿಸಿ ಸರ್ಕಾರ ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಿರುವ ಬಗ್ಗೆಯೂ ನ್ಯಾಯಪೀಠ ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿತು.

ಲೀಚ್‌ಟೆನ್‌ಸ್ಟೀನ್ ಬ್ಯಾಂಕಿನಲ್ಲಿ 26 ಜನ ಇರಿಸಿರುವ ಹಣದ ವಿವರ ಬಹಿರಂಗಗೊಳಿಸಲು ನಿರಾಕರಿಸಿ ಸರ್ಕಾರ ನ್ಯಾಯಾಲಯದಲ್ಲಿ ಸಲ್ಲಿಸಿರುವ ಪ್ರಮಾಣಪತ್ರಕ್ಕೆ ನಿರ್ದೇಶಕರ ದರ್ಜೆಯ ಅಧಿಕಾರಿಯೊಬ್ಬರು ಸಹಿ ಮಾಡಿರುವ ಕುರಿತು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.

ವಿದೇಶಿ ಬ್ಯಾಂಕುಗಳಲ್ಲಿ ದಿಗಿಲು ಹುಟ್ಟಿಸುವ ಮೊತ್ತದ ಕಪ್ಪು ಹಣ ಇದೆ ಎಂಬುದನ್ನು ಒಪ್ಪಿಕೊಂಡ  ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯನ್, ವಿದೇಶಗಳ ಜತೆ ಮಾಡಿಕೊಂಡಿರುವ ಒಪ್ಪಂದಗಳ ಅನ್ವಯ ಮಾಹಿತಿ ಹಂಚಿಕೆಗೆ ಸಾಕಷ್ಟು ಅಡಚಣೆಗಳಿವೆ ಎಂದರು. ಈ ರಿಟ್ ಅರ್ಜಿಯನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಏಕೆ ಪರಿಗಣಿಸಬಾರದು ಎಂದು ನ್ಯಾಯಪೀಠ ಕೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT