ADVERTISEMENT

ಕರ್ಣಾಟಕ ಬ್ಯಾಂಕ್‌ನಿಂದ ಸಂಪೂರ್ಣ ಮಹಿಳಾ ಶಾಖೆ ಆರಂಭ

ಜನತೆಗೆ ನಿರಂತರ ಬ್ಯಾಂಕಿಂಗ್‌ ಸೇವೆ: ಮಹಾಬಲೇಶ್ವರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST
ಬೆಂಗಳೂರಿನ ಬಸವನಗುಡಿಯಲ್ಲಿ ನಿರ್ಮಿಸಲಾಗಿರುವ ಕರ್ಣಾಟಕ ಬ್ಯಾಂಕಿನ ನೂತನ ಕಟ್ಟಡ ಸಂಕೀರ್ಣವನ್ನು ಬ್ಯಾಂಕಿನ ಮಾಜಿ ಅಧ್ಯಕ್ಷ ಪಿ. ರಘುರಾಮ್‌ ಬುಧವಾರ ಉದ್ಘಾಟಿಸಿದರು.
ಬೆಂಗಳೂರಿನ ಬಸವನಗುಡಿಯಲ್ಲಿ ನಿರ್ಮಿಸಲಾಗಿರುವ ಕರ್ಣಾಟಕ ಬ್ಯಾಂಕಿನ ನೂತನ ಕಟ್ಟಡ ಸಂಕೀರ್ಣವನ್ನು ಬ್ಯಾಂಕಿನ ಮಾಜಿ ಅಧ್ಯಕ್ಷ ಪಿ. ರಘುರಾಮ್‌ ಬುಧವಾರ ಉದ್ಘಾಟಿಸಿದರು.   

ಬೆಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ 800ನೇ ಶಾಖೆ (ಸಂಪೂರ್ಣ ಮಹಿಳಾ ಶಾಖೆ)ಯನ್ನು ಬುಧವಾರ ನಗರದ ಬಸವನಗುಡಿಯಲ್ಲಿ ಲೋಕಾರ್ಪಣೆ ಮಾಡುವ ಮೂಲಕ ಹೊಸ ಹೆಜ್ಜೆಯನ್ನು ಇಟ್ಟಿದೆ.

ಬಸವನಗುಡಿಯಲ್ಲಿ ನಿರ್ಮಿತವಾದ ಬೆಂಗಳೂರು ಪ್ರಾದೇಶಿಕ ಕಚೇರಿ, ಸಂಪೂರ್ಣ ಮಹಿಳಾ ಶಾಖೆ (800ನೇ ಶಾಖೆ), ಭದ್ರತಾ ಕೊಠಡಿ, ಕರೆನ್ಸಿ ಚೆಸ್ಟ್, ಬೋರ್ಡ್ ರೂಮ್ ಇತ್ಯಾದಿಗಳನ್ನು ಹೊಂದಿದ ಬ್ಯಾಂಕಿನ ನೂತನ ಕಟ್ಟಡ ಸಂಕೀರ್ಣವನ್ನು ಬ್ಯಾಂಕಿನ ಮಾಜಿ ಅಧ್ಯಕ್ಷ ಪಿ. ರಘುರಾಮ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಪ್ರಥಮ ಸಂಪೂರ್ಣ ಮಹಿಳಾ ಶಾಖೆ (800ನೇ ಶಾಖೆ)ಯನ್ನು ಬ್ಯಾಂಕ್‌ ನಿರ್ದೇಶಕಿ ಉಷಾ ಗಣೇಶ್ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ ಅಧ್ಯಕ್ಷ ಪಿ. ಜಯರಾಮ ಭಟ್‌, ಬ್ಯಾಂಕಿನ ಬೆಂಗಳೂರು ಪ್ರಾದೇಶಿಕ ಕಚೇರಿಯ ನೂತನ ಪ್ರಾಂಗಣವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್‌., ‘ಇಂದು ನಮ್ಮ ಬ್ಯಾಂಕಿಗೆ ಮಹತ್ವದ ದಿನ. ಇಂದು ಸಂಪೂರ್ಣ ಮಹಿಳಾ ಶಾಖೆಯ ಲೋಕಾರ್ಪಣವಾಗಿದೆ. ವಿಶ್ವದಾದ್ಯಂತ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿರುವಾಗ ಇಂತಹ ಒಂದು ಹೊಸ ಹೆಜ್ಜೆಯನ್ನು ಇಡುತ್ತಿರುವುದು ಸಂತೋಷ ತಂದಿದೆ’ ಎಂದರು.

ADVERTISEMENT

‘ಬ್ಯಾಂಕ್ ತನ್ನ ದೂರದರ್ಶಿತ್ವಕ್ಕೆ ಅನುಗುಣವಾಗಿ ಸಮೃದ್ಧ, ಸಶಕ್ತ ಹಾಗೂ ಉತ್ತಮ ನಿರ್ವಹಣೆಯನ್ನು ಒಳಗೊಂಡ ಬ್ಯಾಂಕ್ ಆಗಿ ಹೊರ ಹೊಮ್ಮುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ. ಈ ವರ್ಷ ನಾವು 36 ಹೊಸ ಶಾಖೆಗಳನ್ನು ಪ್ರಾರಂಭಿಸಿದ್ದೇವೆ. ಬ್ಯಾಂಕಿನ ಒಟ್ಟು ವ್ಯವಹಾರ ₹1.06ಲಕ್ಷ ಕೋಟಿಯ ಗಡಿಯನ್ನು ದಾಟಿದೆ’ ಎಂದು ತಿಳಿಸಿದರು.

‘ಮುಂಬರುವ ದಿನಗಳಲ್ಲಿ ಬ್ಯಾಂಕ್ ಎಲ್ಲ ತಂತ್ರಜ್ಞಾನದ ಆವಿಷ್ಕಾರಗಳನ್ನು ಮೈಗೂಡಿಸಿಕೊಂಡು, ತನ್ನ ಮೂಲ ಆಶಯಗಳಿಗೆ ಅನುಗುಣವಾಗಿ ಶ್ರೇಷ್ಠ ಮೌಲ್ಯ ಹಾಗೂ ಅಸ್ಮಿತೆಯನ್ನು ಉಳಿಸಿಕೊಂಡು ದೇಶದ ಜನತೆಗೆ ನಿರಂತರ ಸೇವೆ ಸಲ್ಲಿಸಲಿದೆ’ ಎಂದರು.

ಬ್ಯಾಂಕಿನ ನಿರ್ದೇಶಕರ ಮಂಡಳಿ, ಪ್ರಾದೇಶಿಕ ಕಚೇರಿಯ ಉಪಮಹಾಪ್ರಬಂಧಕರು, ಉನ್ನತ ಅಧಿಕಾರಿಗಳು, ಸ್ಥಳೀಯ ಶಾಖಾ ಪ್ರಬಂಧಕರು, ಸಿಬ್ಬಂದಿ ಹಾಗೂ ಬ್ಯಾಂಕಿನ ಗ್ರಾಹಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.