ಮಂಗಳೂರು: ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್, 2012-13ನೇ ಹಣಕಾಸು ವರ್ಷದಲ್ಲಿ ರೂ 65,000 ಕೋಟಿಗಳಷ್ಟು ವ್ಯವಹಾರ ನಡೆಸುವ ಗುರಿ ನಿಗದಿ ಮಾಡಿದೆ.ಪ್ರಸಕ್ತ ಸಾಲಿನಲ್ಲಿ ಶೇ 25ರಷ್ಟು ವಹಿವಾಟಿನ ಪ್ರಗತಿ ನಿರೀಕ್ಷಿಸಲಾಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ್ ಭಟ್ ಅವರು ಇಲ್ಲಿಯ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದಿನ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ವಹಿವಾಟಿನ ಹೊಸ ಮೈಲಿಗಲ್ಲು ದಾಟಿದೆ. ಸದ್ಯಕ್ಕೆ 500ಕ್ಕೂ ಹೆಚ್ಚು ಶಾಖೆಗಳನ್ನೂ, ರೂ 52,000 ಕೋಟಿಗೂ ಮೀರಿದ ವ್ಯವಹಾರವನ್ನೂ ಹಾಗೂ 50 ಲಕ್ಷಕ್ಕೂ ಮಿಕ್ಕಿದ ಗ್ರಾಹಕರನ್ನೂ ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ 7.50 ಲಕ್ಷದಷ್ಟು ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2012-13 ನೇ ಸಾಲಿನಲ್ಲಿ 10 ಲಕ್ಷ ಹೊಸ ಗ್ರಾಹಕರನ್ನು ಬ್ಯಾಂಕ್‌ಗೆ ಸೇರಿಸಿಕೊಳ್ಳುವ ಗುರಿ ಇದೆ ಎಂದರು.
50 ನೂತನ ಶಾಖೆಗಳನ್ನು ಪ್ರಾರಂಭಿಸುವ ಮೂಲಕ ಶಾಖೆಗಳ ಸಂಖ್ಯೆಯನ್ನು 550ಕ್ಕೆ ಹಾಗೂ 100 ಹೊಸ `ಎಟಿಎಂ~ಗಳನ್ನು ಆರಂಭಿಸುವ ಮೂಲಕ `ಎಟಿಎಂ~ಗಳ ಸಂಖ್ಯೆಯನ್ನು 450ಕ್ಕೆ ಹೆಚ್ಚಿಸಲೂ ಉದ್ದೇಶಿಸಲಾಗಿದೆ. ಶೀಘ್ರದಲ್ಲಿಯೇ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನೂ ಆರಂಭಿಸಲಿದೆ ಎಂದೂ ಜಯರಾಮ್ ಭಟ್ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.