ADVERTISEMENT

ಕಲ್ಪತರು ನಾಡಲ್ಲಿ ಎಳನೀರಿಗೆ ಕೊರತೆ

ತೆಂಗಿನ ಬೆಳೆಗೂ ತಟ್ಟಿದ ಬರದ ಬಿಸಿ; ಗೃಹ ಬಳಕೆಗೂ ಅಭಾವ

ಜಿ.ಬಿ.ನಾಗರಾಜ್
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST
ಕಲ್ಪತರು ನಾಡಲ್ಲಿ ಎಳನೀರಿಗೆ ಕೊರತೆ
ಕಲ್ಪತರು ನಾಡಲ್ಲಿ ಎಳನೀರಿಗೆ ಕೊರತೆ   

ಮೈಸೂರು: ರಾಜ್ಯದಲ್ಲಿ ತಲೆದೋರಿರುವ ಬರದ ಬಿಸಿ ತೆಂಗಿನ ಬೆಳೆಗೂ ತಟ್ಟಿದೆ. ಕಲ್ಪತರು ನಾಡಲ್ಲಿ ಎಳನೀರಿಗೆ ಕೊರತೆ ಉಂಟಾಗಿದ್ದು, ಗೃಹ ಬಳಕೆಯ ತೆಂಗಿನಕಾಯಿಗೂ ಅಭಾವ ಸೃಷ್ಟಿಯಾಗುವ ವಾತಾವರಣ ನಿರ್ಮಾಣವಾಗಿದೆ.

ತೋಟಗಾರಿಕೆಯಲ್ಲಿ ಪ್ರಮುಖ ಬೆಳೆಯಾಗಿರುವ ತೆಂಗನ್ನು ರಾಜ್ಯದ 4.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಪ್ರತಿ ವರ್ಷ 30,563 ಲಕ್ಷ ತೆಂಗಿನಕಾಯಿಗಳು ಉತ್ಪಾದನೆಯಾಗುತ್ತವೆ. ಆದರೆ ಸತತ ಎರಡು ವರ್ಷ ರಾಜ್ಯ ಬರ ಪರಿಸ್ಥಿತಿಗೆ ತುತ್ತಾಗಿರುವುದು ಕಲ್ಪತರು ಬೆಳೆಯ ಇಳುವರಿ ಕುಂಠಿತವಾಗಲು ಕಾರಣವಾಗಿದೆ.

ರಾಜ್ಯದಲ್ಲಿ ತೆಂಗು ಬೆಳೆಯುವ ಮಲೆನಾಡಿನ ಸೆರಗಿನಲ್ಲಿರುವ ಏಳು ಜಿಲ್ಲೆಯ 17ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಕಳೆದ ವರ್ಷಕ್ಕಿಂತ ತೀವ್ರವಾಗಿದೆ. ಹೀಗಾಗಿ ಬೇಸಿಗೆಯಲ್ಲಿ ಎಳನೀರಿನ ಕೊರತೆ ಉಂಟಾಗಿದೆ. ಅಲ್ಲದೇ, ಇರುವ ಅಲ್ಪ ಪ್ರಮಾಣದ ತೆಂಗನ್ನು ಎಳನೀರಾಗಿ ಪರಿವರ್ತಿಸಿ ರೈತರು ಮಾರಾಟ ಮಾಡುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಗೃಹ ಬಳಕೆಯ ತೆಂಗಿನಕಾಯಿಗೂ ಅಭಾವ ಉಂಟಾಗುವ ಭೀತಿಯಿದೆ.

ಮೈಸೂರು ಜಿಲ್ಲೆಯ ತೋಟಗಾರಿಕಾ ಬೆಳೆಯಲ್ಲಿ ತೆಂಗಿನದ್ದು ಸಿಂಹಪಾಲು. 25,590 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಜಿಲ್ಲೆಯ ತೋಟಗಾರಿಕಾ ಬೆಳೆಯ ಶೇಘಿ 48 ಭಾಗವನ್ನು ತೆಂಗು ವ್ಯಾಪಿಸಿದೆ. ಈ ಪೈಕಿ ಅರ್ಧದಷ್ಟು ಭಾಗ ನೀರಾವರಿಯಾಗಿದ್ದು, ಉಳಿದ ತೋಟಗಳು ಮಳೆಯಾಶ್ರಿತವಾಗಿವೆ. ಮೈಸೂರಿನಲ್ಲಿ 2011-12 ರಲ್ಲಿ 3,137 ಲಕ್ಷ ಕಾಯಿಗಳನ್ನು ಬೆಳೆಯಲಾಗಿದೆ. ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣದಲ್ಲಿ 11 ಸಾವಿರ ಹೆಕ್ಟೇರ್ ತೆಂಗಿನ ತೋಟವಿದೆ. ಎರಡೂ ತಾಲ್ಲೂಕುಗಳಿಗೂ ಈ ವರ್ಷ ಬರ ವ್ಯಾಪಿಸಿದೆ. ರಾಜ್ಯದಲ್ಲೇ ಅತಿ ಹೆಚ್ಚು ತೆಂಗು ಬೆಳೆಯುವ ತುಮಕೂರು (1,32,587 ಹೆಕ್ಟೇರ್), ಹಾಸನ (61,188 ಹೆಕ್ಟೇರ್), ಮಂಡ್ಯ, ಚಿತ್ರದುರ್ಗ ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಹೀಗಾಗಿ ತೆಂಗು ಇಳುವರಿಯಲ್ಲಿ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ಇದೆ.

'ತೆಂಗಿನಮರದ ಬೇರುಗಳು ಮೇಲ್ಮಟ್ಟದಲ್ಲಿ ಇರುವ ಕಾರಣಕ್ಕೆ ನೀರು ಹೆಚ್ಚು ಬೇಕು. ಹನಿ ನೀರಾವರಿಯಲ್ಲಿ ಒಂದು ಮರಕ್ಕೆ ನಿತ್ಯ 60 ಲೀಟರ್ ನೀರು ಬೇಕು. ಬರ ಪರಿಸ್ಥಿತಿಯಲ್ಲಿ ರೈತರಿಗೆ ಈ ಪ್ರಮಾಣದ ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ತೋಟದಲ್ಲಿ ಅಂತರ ಬೆಳೆ ಬೆಳೆದರೆ ತಕ್ಕ ಮಟ್ಟಿಗೆ ಈ ಸಮಸ್ಯೆಯಿಂದ ಪಾರಾಗಬಹುದು. ಅತಿ ಹೆಚ್ಚು ಫಲ ಬಿಡುವ ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲೇ ಎಳನೀರಿಗೆ ಕೊರತೆ ಉಂಟಾಗಿದೆ' ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಎಂ.ನಾಗರಾಜು 'ಪ್ರಜಾವಾಣಿ'ಗೆ ತಿಳಿಸಿದರು.

ಗೃಹ ಬಳಕೆಗೂ ಅಭಾವ?
ರಾಜ್ಯದಲ್ಲಿ ಉತ್ಪಾದನೆಯಾಗುವ ತೆಂಗಿನಲ್ಲಿ ಶೇ 25 ರಿಂದ 30 ಭಾಗ ಎಳನೀರಾಗಿ ಮಾರಾಟವಾಗುತ್ತದೆ. ಪ್ರಸಕ್ತ ವರ್ಷ ಬೇಸಿಗೆ ಧಗೆ ಹೆಚ್ಚಾಗಿರುವುದರಿಂದ ಸಹಜವಾಗಿ ಎಳನೀರಿಗೂ ಬೇಡಿಕೆ ಬಂದಿದೆ. ಆದರೆ ಮಳೆಯಾಶ್ರಿತ ತೋಟಗಳಲ್ಲಿ ತೆಂಗು ಫಲ ನೀಡಿಲ್ಲ. ಹೀಗಾಗಿ ಇರುವ ತೆಂಗು ಬೆಳೆಯನ್ನೇ ಎಳನೀರಾಗಿ ಮಾರಾಟ ಮಾಡಲಾಗುತ್ತಿದೆ.

ತೆಂಗಿನಕಾಯಿಗೆ ರೈತರಿಗೆ ಸರಾಸರಿ 4 ರೂಪಾಯಿ ದೊರೆತರೆ, ಎಳನೀರಿಗೆ 8 ರಿಂದ 10 ರೂಪಾಯಿ ದೊರೆಯುತ್ತದೆ. ಇದರಿಂದ ಎಳನೀರಿಗೆ ರೈತರು ಒಲವು ತೋರುತ್ತಿದ್ದಾರೆ. ಮದ್ದೂರಿನಿಂದ ನಿತ್ಯ 1 ಲಕ್ಷದಷ್ಟು ಎಳನೀರು ಮುಂಬೈ, ನಾಗಪುರ, ದೆಹಲಿ ಸೇರಿದಂತೆ ಉತ್ತರ ಭಾರತದ ನಗರಗಳಿಗೆ ಸರಬರಾಜು ಆಗುತ್ತಿದೆ. ಜುಲೈ ವೇಳೆಗೆ ಗೃಹ ಬಳಕೆಯ ತೆಂಗಿನಕಾಯಿಗೆ ರಾಜ್ಯದಲ್ಲಿ ಅಭಾವ ಸೃಷ್ಟಿಯಾಗಲಿದೆ ಎನ್ನುತ್ತಾರೆ ತೆಂಗು ಅಭಿವೃದ್ಧಿ ಮಂಡಳಿ ಉಪನಿರ್ದೇಶಕ ವಿಜಯ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.