ADVERTISEMENT

ಕಳಸದಲ್ಲಿ ಹಣಕ್ಕಾಗಿ ಜನರ ಪರದಾಟ!

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST
ಕಳಸದ ಮುಖ್ಯ ರಸ್ತೆಯ ಕರ್ಣಾಟಕ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿ 'ನಗದು ಇಲ್ಲ' ಎಂಬ ಸೂಚನಾ ಫಲಕ ಅಳವಡಿಸಿರುವುದು
ಕಳಸದ ಮುಖ್ಯ ರಸ್ತೆಯ ಕರ್ಣಾಟಕ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿ 'ನಗದು ಇಲ್ಲ' ಎಂಬ ಸೂಚನಾ ಫಲಕ ಅಳವಡಿಸಿರುವುದು   

ಕಳಸ: ಬ್ಯಾಂಕ್‌ ಖಾತೆಯಲ್ಲಿ ಹಣವಿದ್ದರೂ ಹಣ ತೆಗೆಯುಲು ಹೋದವರಿಗೆ 'ನಗದು ಇಲ್ಲ' ಎಂಬ ಉತ್ತರ. ಎಟಿಎಂಗಳಲ್ಲಿ ನಗದು ಹಿಂತೆಗೆಯಲು ಹೋದ ಸ್ಥಳೀಯರು ಮತ್ತು ಪ್ರವಾಸಿಗರಿಗೂ ಅದೇ ಉತ್ತರ! ಇದು ಪಟ್ಟಣದಲ್ಲಿ ಎರಡು ವಾರಗಳಿಂದ ಕಂಡು ಬಂದಿರುವ ನೋಟುಗಳ ಅಭಾವದ ಸ್ಪಷ್ಟ ಚಿತ್ರಣ.

ಪಟ್ಟಣದಲ್ಲಿ ಬಹುತೇಕ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳು ಇವೆ. ಕೆಲ ಗ್ರಾಮೀಣ ಬ್ಯಾಂಕು ಮತ್ತು ಸಹಕಾರಿ ಬ್ಯಾಂಕುಗಳೂ ಇವೆ. ಆದರೆ, ಈ ಎಲ್ಲ ಬ್ಯಾಂಕುಗಳಲ್ಲೂ ಹಣದ ಕೊರತೆ ಇದ್ದು ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಶನಿವಾರ ತೋಟದ ಕಾರ್ಮಿಕರ ಸಂಬಳ ಪಾವತಿಗೂ ಬ್ಯಾಂಕುಗಳಲ್ಲಿ ಹಣ ಸಿಗದೆ ಬೆಳೆಗಾರರು ಚಿಂತೆಗೊಳಗಾದರು.

'ನಗದಿನ ತೀವ್ರ ಕೊರತೆ ಇದೆ. ಹಣವನ್ನು ಬೇರೆಯವರ ಖಾತೆಗೆ ಆನ್‍ಲೈನ್ ಮೂಲಕ ವರ್ಗಾಯಿಸಿ' ಎಂಬ ಸಲಹೆ ಬ್ಯಾಂಕ್‌ನ ಸಿಬ್ಬಂದಿಯಿಂದ ಬರುತ್ತಿದೆ.

ADVERTISEMENT

'ನಮ್ಮ ಹಣವನ್ನು ಬ್ಯಾಂಕ್‌ನಿಂದ ಮರಳಿ ಪಡೆಯಲೂ ಅವಕಾಶ ಇಲ್ಲವಾಗಿದೆ' ಎಂದು ಹಲವು ಗ್ರಾಹಕರು ಸಿಡಿಮಿಡಿಗೊಂಡರು.

‘ಆನ್‍ಲೈನ್ ವಹಿವಾಟು ಅನಿವಾರ್ಯಗೊಳಿಸಲು ಬ್ಯಾಂಕುಗಳಿಗೆ ಕಡಿಮೆ ಪ್ರಮಾಣದಲ್ಲಿ ನಗದು ಪೂರೈಸಲಾಗುತ್ತಿದೆ’ ಎಂಬ ಮಾತು ಕೇಳಿ ಬರುತ್ತಿದೆ. ಚಲಾ
ವಣೆಯಲ್ಲಿರುವ ₹2,000 ನೋಟಗಳು ಬ್ಯಾಂಕ್‌ಗಳಿಗೆ ಮರಳಿ ಬಾರದೆ ಇರುವುದೂ ನಗದಿನ ಕೊರತೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ.

ನಗದು ಕೊರತೆಗೆ ಕಾರಣ ಏನು ಎಂದು ಪ್ರಶ್ನಿಸಿದರೆ ರಾಷ್ಟ್ರೀಕೃತ ಬ್ಯಾಂಕೊಂದರ ವ್ಯವಸ್ಥಾಪಕರು, 'ನಮಗೂ ಸ್ಪಷ್ಟ ಕಾರಣ ಗೊತ್ತಿಲ್ಲ. ನಮಗೆ ನಗದು ನೀಡುವ ಶಾಖೆಯಲ್ಲಿ ₹50 ಲಕ್ಷ ಕೇಳಿದರೆ ₹10 ಲಕ್ಷ ಮಾತ್ರ ನೀಡುತ್ತಿದ್ದಾರೆ. ನಾವು ಯಾರಿಗೆ ನಗದು ನೀಡುವುದು ಎಂದು ಅರ್ಥವಾಗದೆ ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದೇವೆ' ಎನ್ನುತ್ತಾರೆ. '₹2ಸಾವಿರ ನೋಟನ್ನು ಅಮಾನ್ಯಗೊಳಿಸಲಾಗುತ್ತದೆ ಮತ್ತು ಅದರ ಮುದ್ರಣ ನಿಂತೇ ಹೋಗಿದೆ' ಎಂಬ ವದಂತಿಯೂ ಪಟ್ಟಣದಲ್ಲಿ ಹರಡಿದೆ.

‘ಕಳಸ, ಕುದುರೆಮುಖ ಮತ್ತು ಹೊರನಾಡಿಗೆ ಪ್ರತಿ ದಿನ ಮತ್ತು ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಎಟಿಎಂ ಕೇಂದ್ರಗಳಲ್ಲಿ ಹಣ ಇಲ್ಲದಿರುವುದನ್ನು ಕಂಡು ಅವರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಕಾರ್ಡ್ ಸ್ವೈಪ್ ಮಾಡುವ ಯಂತ್ರಗಳೂ ಇಲ್ಲದೆ, ಎಟಿಎಂಗಳೂ ನಗದು ನೀಡದಿದ್ದಾಗ ಅವರು ಕಕ್ಕಾಬಿಕ್ಕಿ ಆಗುತ್ತಾರೆ. ಬ್ಯಾಂಕುಗಳು ಈ ಬಗ್ಗೆ ಗಮನ ಹರಿಸಲೇಬೇಕು’ ಎಂದು ಜೆಡಿಎಸ್ ಮುಖಂಡ ರವಿ ರೈ ಆಗ್ರಹಿಸುತ್ತಾರೆ. ಕಾಫಿ, ಅಡಿಕೆ, ಕಾಳುಮೆಣಸು ಮಾರಾಟ ಮಾಡಿದರೂ ವ್ಯಾಪಾರಸ್ಥರ ಬಳಿಯೂ ನಗದು ಸಿಗದೆ ಹೋಬಳಿಯ ಎಲ್ಲ ಆರ್ಥಿಕ ವಹಿವಾಟು ಕೂಡ ಕಂಗೆಟ್ಟಿದೆ.

–ರವಿ ಕೆಳಂಗಡಿ, ಕಳಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.