ADVERTISEMENT

ಕಳಸ: ಪರಿಹಾರ ಕಾಣದ ನಗದು ಕೊರತೆ ಸಮಸ್ಯೆ

ಕಾಫಿ ತೋಟದ ಮಾಲೀಕರು, ಪ್ರವಾಸಿಗರಿಗೆ ಸಂಕಷ್ಟ

ರವಿ ಕೆಳಂಗಡಿ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಳಸ: ಹೋಬಳಿಯಾದ್ಯಂತ ಇರುವ ಎಟಿಎಂಗಳಲ್ಲಿ ನಗದು ಕೊರತೆ ತೀವ್ರವಾಗಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಪಟ್ಟಣದ ಯಾವುದೇ ಬ್ಯಾಂಕ್‌ ಹಾಗೂ ಎಟಿಎಂಗಳಲ್ಲಿ ಗ್ರಾಹಕರು ಬಯಸಿದಷ್ಟು ನಗದು ಸಿಗುತ್ತಿಲ್ಲ. ಇದರಿಂದಾಗಿ ಎಲ್ಲ ವರ್ಗದವರಿಗೂ ತೊಂದರೆ ಉಂಟಾಗಿದೆ.

ಪಟ್ಟಣದಲ್ಲಿರುವ ಯಾವುದೇ ಎಟಿಎಂಗಳಲ್ಲೂ ಹಣ ಸಿಗುತ್ತದೆ ಎಂಬ ಖಾತರಿ ಇಲ್ಲವಾಗಿದೆ. ಇಲ್ಲಿನ ಎಟಿಎಂಗಳನ್ನು ನಂಬಿ ಹೊರನಾಡು, ಕಳಸ ಮತ್ತು ಕುದುರೆಮುಖಕ್ಕೆ ಭೇಟಿ ನೀಡುವ ಪ್ರವಾಸಿಗರ ಪಾಡು ಹೇಳತೀರದಾಗಿದೆ. ನಗದು ಸಿಗದೆ, ಆನ್‍ಲೈನ್ ವ್ಯವಹಾರಕ್ಕೂ ಅವಕಾಶ ಇಲ್ಲದೆ ಅವರು ಪಡಿಪಾಟಲು ಪಡುತ್ತಿದ್ದಾರೆ.

ADVERTISEMENT

ಪಕ್ಕದ ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಈ ಸಮಸ್ಯೆ ಇಲ್ಲ. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ಯಾಕೆ ಈ ಸಮಸ್ಯೆ ಇದೆ ಎಂದು ಕಳಸ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಮಹೇಂದ್ರ ಅವರನ್ನು 'ಪ್ರಜಾವಾಣಿ' ಕೇಳಿದಾಗ, 'ನಮಗೆಲ್ಲ ಹಣ ನೀಡುವ ಚಿಕ್ಕಮಗಳೂರು ಕರೆನ್ಸಿ ಚೆಸ್ಟ್‌ನಲ್ಲಿ ನಗದಿನ ವಿಪರೀತ ಕೊರತೆ ಇದೆ. ಕಳಸದ ಎಲ್ಲ ಬ್ಯಾಂಕುಗಳು ಪರಸ್ಪರರಿಗೆ ಹಣ ನೀಡುವ ಮತ್ತು ಪಡೆಯುವ ಜಾಲ ಹೊಂದಿವೆ. ಆದರೆ, ಈಗ ಎಲ್ಲ ಬ್ಯಾಂಕುಗಳಲ್ಲೂ ನಗದು ಸಮಸ್ಯೆ ಇದೆ’ ಎಂದರು.

'ಶನಿವಾರ ಬಂದರೆ ನಮಗೆ ನಡುಕ ಶುರು ಆಗುತ್ತದೆ. ತೋಟಗಳ ಕಾರ್ಮಿಕರ ವೇತನ ಪಾವತಿಗೆ ಒಂದೊಂದು ತೋಟದವರು ₹ 3ರಿಂದ ₹ 4 ಲಕ್ಷ ಮೊತ್ತದ ಚೆಕ್ ಹಿಡಿದು ಬರುತ್ತಾರೆ. ಆದರೆ, ನಾವು ₹50 ಸಾವಿರ ನೀಡಲೂ ಇಲ್ಲಿ ಹಣದ ಕೊರತೆ ಇದೆ. ಇದರಿಂದಾಗಿ ಕೆಲವರು ಬ್ಯಾಂಕ್‌ನಲ್ಲಿ ಗಲಾಟೆ ಮಾಡುತ್ತಿದ್ದಾರೆ. ನಮ್ಮ ಕೆಲಸದ ಒತ್ತಡವೂ ಹೆಚ್ಚಿದೆ' ಎನ್ನುತ್ತಾರೆ ಮತ್ತೊಂದು ಬ್ಯಾಂಕಿನ ಸಿಬ್ಬಂದಿ.

'ಬ್ಯಾಂಕ್‌ನಲ್ಲಿ ನಮಗೆ ಬೇಕಾದಷ್ಟು ನಗದು ಸಿಗುತ್ತಿಲ್ಲ. ಇದರಿಂದಾಗಿ ಪ್ರತಿ ವಾರ ತೋಟದಲ್ಲಿ ಕಾರ್ಮಿಕರ ಸಂಬಳ ಪಾವತಿಗೆ ತುಂಬ ತೊಂದರೆ ಆಗಿದೆ. ಆನ್‍ಲೈನ್ ವ್ಯವಹಾರ ನಡೆಸುವ ಬಗ್ಗೆ ಕಾರ್ಮಿಕರಿಗೆ ನಂಬಿಕೆ ಇಲ್ಲ. ಅವರು ನಗದನ್ನೇ ಬಯಸುತ್ತಾರೆ' ಎಂದು ಕಾಫಿ ತೋಟವೊಂದರ ವ್ಯವಸ್ಥಾಪಕರು ಅಭಿಪ್ರಾಯಪಡುತ್ತಾರೆ.

'ನಗದಿನ ಕೊರತೆ ಪರಿಣಾಮವಾಗಿ ಆನ್‍ಲೈನ್ ವ್ಯವಹಾರ ಹೆಚ್ಚಾಗಿದೆ. ಹಿಂದೆ ದಿನಕ್ಕೆ 15ರಷ್ಟು ಆನ್‍ಲೈನ್ ವರ್ಗಾವಣೆ ಇದ್ದದ್ದು ಈಗ 100ರ ಗಡಿ ದಾಟಿದೆ' ಎಂದು ಮತ್ತೊಂದು ಬ್ಯಾಂಕಿನ ಅಧಿಕಾರಿ ಹೇಳಿದ್ದಾರೆ.

ಕಾಫಿ, ಅಡಿಕೆ, ಕಾಳುಮೆಣಸಿನ ವ್ಯಾಪಾರದ ಮೇಲೂ ನಗದು ಕೊರತೆ ಪರಿಣಾಮ ಬೀರಿದೆ. ಸರಕಿಗೆ ಬೆಲೆ ನಿಗದಿಯಾಗಿ 15 ದಿನ ಕಳೆದರೂ ನಗದು ಸಿಗುತ್ತಿಲ್ಲ. ಉತ್ತಮ ಧಾರಣೆಯೂ ಲಭ್ಯವಿಲ್ಲ ಎಂದು ವ್ಯಾಪಾರಸ್ಥರು ಮತ್ತು ಬೆಳೆಗಾರರು ದೂರುತ್ತಿದ್ದಾರೆ.

'ನಮ್ಮ ಎಟಿಎಂಗಳಲ್ಲಿ ನಗದನ್ನು ಹಾಕುತ್ತಿಲ್ಲ. ಏಕೆಂದರೆ ನಮ್ಮ ಬ್ಯಾಂಕ್‌ಗೆ ಬರುವ ಗ್ರಾಹಕರಿಗೆ ಪಾವತಿ ಮಾಡಲೂ ನಮ್ಮ ಬಳಿ ಹಣ ಇಲ್ಲ. ಕರೆನ್ಸಿ ಚೆಸ್ಟ್‌ನಲ್ಲಿ ಕೇಳಿದರೆ ರಿಸರ್ವ್ ಬ್ಯಾಂಕ್‍ನಿಂದಲೇ ಹಣ ಬರುತ್ತಿಲ್ಲ ಎಂದು ಹೇಳುತ್ತಾರೆ' ಎಂದು ಬ್ಯಾಂಕ್ ನೌಕರರು ಸ್ಪಷ್ಟನೆ ನೀಡುತ್ತಿದ್ದಾರೆ.
***
ಅಕ್ರಮ ಚಲಾವಣೆ ನಿಗ್ರಹ ಅಲ್ಲ
ಚುನಾವಣೆಯಲ್ಲಿ ಹಣದ ಅಕ್ರಮ ಚಲಾವಣೆ ತಡೆಯಲು ಈ ಬಗೆಯಲ್ಲಿ ಬಿಗಿ ಮಾಡಲಾಗಿದೆ ಎಂಬ ಮಾತನ್ನು ಬ್ಯಾಂಕಿನ ಸಿಬ್ಬಂದಿ ಒಪ್ಪುತ್ತಿಲ್ಲ. 'ಜನವರಿಯಿಂದಲೂ ಹಂತ ಹಂತವಾಗಿ ನಗದಿನ ಪ್ರಮಾಣ ಕಡಿಮೆ ಮಾಡಲಾಗುತ್ತಿದೆ. ಹಿಂದೆ ವಾರಕ್ಕೆ ನಮಗೆ ಕರೆನ್ಸಿ ಚೆಸ್ಟ್‌ನಲ್ಲಿ ₹30-40 ಲಕ್ಷ ನೀಡಲಾಗುತ್ತಿತ್ತು. ಈಗ ವಾರಕ್ಕೆ ₹10 ಲಕ್ಷ ಸಿಗುವುದೇ ಕಷ್ಟವಾಗಿದೆ' ಎಂದು ರಾಷ್ಟ್ರೀಕೃತ ಬ್ಯಾಂಕೊಂದರ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.