ADVERTISEMENT

ಕಾಫಿ: ಬಂಪರ್‌ ಬೆಳೆ ನಿರೀಕ್ಷೆ

ಗಿಡದಲ್ಲಿ ಅರಳಿ ನಿಂತ ಹೂ: ಬೆಳೆಗಾರರ ಮುಖದಲ್ಲಿ ಮೂಡಿದ ಮಂದಹಾಸ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಮೂಡಿಗೆರೆ ತಾಲ್ಲೂಕಿನ ಹ್ಯಾಂಡ್‌ಪೋಸ್ಟಿನ ಸಮೀಪ ಕಾಫಿ ತೋಟವೊಂದರಲ್ಲಿ ಅರಳಿ ನಿಂತಿರುವ ಕಾಫಿ ಹೂವು
ಮೂಡಿಗೆರೆ ತಾಲ್ಲೂಕಿನ ಹ್ಯಾಂಡ್‌ಪೋಸ್ಟಿನ ಸಮೀಪ ಕಾಫಿ ತೋಟವೊಂದರಲ್ಲಿ ಅರಳಿ ನಿಂತಿರುವ ಕಾಫಿ ಹೂವು   

ಮೂಡಿಗೆರೆ: ತಾಲ್ಲೂಕಿನಲ್ಲಿ ಹತ್ತು ದಿನಗಳ ಹಿಂದೆ ಸುರಿದ ಮಳೆಗೆ ಕಾಫಿ ಗಿಡಗಳಲ್ಲಿ ಮೊಸರು ಚೆಲ್ಲಿದಂತೆ ಹೂವು ಅರಳತೊಡಗಿದ್ದು, ಕಾಫಿ ಬೆಳೆಗಾರನ ಮುಖದಲ್ಲಿ ಮಂದಹಾಸ ಮೂಡಿದೆ.

ಬಣಕಲ್‌, ಕೊಟ್ಟಿಗೆಹಾರ, ಬಾಳೂರು, ಮೂಡಿಗೆರೆ, ಕಳಸ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಮೂರು ದಿನಗಳಿಂದ ಕಾಫಿ ತೋಟಗಳಲ್ಲಿ ಹೂವಿನ ಚೆಲುವು ನಳನಳಿಸಿದೆ.

ಹೂವಿನ ಮೇಲೆ ಮಳೆ ಸುರಿಯಬಹುದೇನೋ ಎಂಬ ಆತಂಕದಲ್ಲಿದ್ದ ಬೆಳೆಗಾರರಿಗೆ, ಮಳೆರಾಯ ಸ್ಪಂದಿಸಿದ್ದು, ಮೂರ್ನಾಲ್ಕು ದಿನಗಳಿಂದ ಮಳೆ ಕಾಣಿಸಿಕೊಳ್ಳದೆ ಇರುವುದರಿಂದ ಹೂವು ಮಾಗಲು ನೆರವಾಗಿ ಕಾಫಿ ಬೆಳೆಗಾರರ ಹರ್ಷ ಇಮ್ಮಡಿಗೊಳಿಸಿದೆ.

ADVERTISEMENT

20 ದಿನಗಳಿಂದ ಬೇಸಿಗೆಯ ಬಿಸಿಲು ಹೆಚ್ಚಾಗಿದ್ದರಿಂದ, ರೋಬಸ್ಟಾ ಹಾಗೂ ಅರೇಬಿಕಾ ಕಾಫಿ ಗಿಡಗಳಲ್ಲಿ ಉತ್ತಮವಾಗಿ ಮೊಗ್ಗು ಕಟ್ಟಿದ್ದವು. ಮೊಗ್ಗಿನ ಮೇಲೆ ಬೆಳೆಗಾರರ ನಿರೀಕ್ಷೆಯಂತೆ ಮಳೆ ಸುರಿದಿದ್ದರಿಂದ, ರೋಬಸ್ಟಾ ಹಾಗೂ ಅರೇಬಿಕಾ ಎರಡೂ ತಳಿಗಳಲ್ಲೂ ಉತ್ತಮ ಹೂವಾಗಿದ್ದು, ಬಂಪರ್‌ ಬೆಳೆ ಬರುವ ನಿರೀಕ್ಷೆಯಿದೆ. ಮುಂದಿನ ಎಂಟತ್ತು ದಿನಗಳಲ್ಲಿ ಪನ್ನೀರಿನಂತೆ ಮಳೆ ಸುರಿದರೆ ರೈತರಿಗೆ ವರವಾಗಲಿದೆ.

ಕಾಫಿ ತೋಟಗಳಲ್ಲಿ ದೃಷ್ಟಿ ಹಾಯಿಸಿದಷ್ಟೂ ಬೆಳ್ಳನೆಯ ಹೂಗೊಂಚಲು ಕಂಗೊಳಿಸುತ್ತಿವೆ. ಹೆದ್ದಾರಿಯ ಇಕ್ಕೆಲದಲ್ಲಿರುವ ಕಾಫಿ ತೋಟಗಳಂತೂ ದಾರಿಹೋಕರನ್ನು ತನ್ನತ್ತ ಸೆಳೆಯುತ್ತಿದ್ದು, ಕಾಫಿ ಹೂವಿನ ಪರಿಮಳ ಇಡೀ ಪ್ರದೇಶವನ್ನೇ ವ್ಯಾಪಿಸಿದೆ.

ಕಳೆದ ಬಾರಿ ಪರಿಸರಣ ಮಳೆ ಕೈಕೊಟ್ಟಿದ್ದರಿಂದ ಕಾಫಿ ಹೂವರಳಲು ಅಡ್ಡಿ ಉಂಟಾಗಿ, ವರ್ಷದ ಬೆಳೆಯಲ್ಲಿ ಶೇ 40ಕ್ಕೂ ಅಧಿಕ ಇಳುವರಿ ಕುಂಠಿತವಾಗಿತ್ತು. ಜತೆಗೆ ಬೆಲೆಯ ಏರಿಳಿತದಿಂದಲೂ ಕಾಫಿ ಬೆಳೆಗಾರನಿಗೆ ನಷ್ಟ ಉಂಟಾಗಿದ್ದು, ರೈತರು ವಾರ್ಷಿಕ ವೆಚ್ಚಕ್ಕೆ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹಣ ಉಳಿತಾಯ: ಉತ್ತಮವಾಗಿ ಮಳೆ ಸುರಿದಿದ್ದರಿಂದ ಈ ಬಾರಿ ಕಾಫಿ ಬೆಳೆಗಾರರಿಗೆ ನೀರು ಹಾಯಿಸುವ ಕೆಲಸ ಉಳಿದಿದೆ. ಇದಕ್ಕೆ ಮಾಡುತ್ತಿದ್ದ ಅಪಾರ ವೆಚ್ಚ ಉಳಿದಂತಾಗಿದೆ.

ಮೂರ್ನಾಲ್ಕು ವರ್ಷಗಳಿಂದ ಬೆಳೆ ಹಾಗೂ ಬೆಲೆಯ ಏರಿಳಿತದಿಂದ ಕಂಗಾಲಾಗಿರುವ ಕಾಫಿ ಬೆಳೆಗಾರನಿಗೆ ಈ ವರ್ಷ ಉತ್ತಮ ಬೆಲೆ ಸಿಗುವ ಕನಸು ಚಿಗುರಿದೆ.
–ಕೆ.ವಾಸುದೇವ್‌

*
ಕಾಫಿ ಬೆಳೆಗೆ ಈ ಬಾರಿಯ ಮಳೆ ಉತ್ತಮವಾಗಿದ್ದು, ಹೂವಾಗಿರುವ ಕಾಫಿ ಕಾಯಾಗಿ ಪರಿಣಮಿಸಿದರೆ ಉತ್ತಮ ಬೆಳೆ ಪಡೆಯಬಹುದು.
–ಮಹೇಶ್‌, ಕಾಫಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.