ADVERTISEMENT

ಕಾರು ಮಾರಾಟ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST
ಕಾರು ಮಾರಾಟ ಚೇತರಿಕೆ
ಕಾರು ಮಾರಾಟ ಚೇತರಿಕೆ   

ನವದೆಹಲಿ (ಪಿಟಿಐ): ವಾಹನ ತಯಾರಿಕಾಕಂಪೆನಿಗಳಾದ ಹುಂಡೈ ಮೋಟಾರ್,ಟಾಟಾ ಮೋಟಾರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಹೀರೊ ಮೋಟೊ ಕಾರ್ಪ್, ಬಜಾಜ್ ಆಟೊ, ಡಿಸೆಂಬರ್ ತಿಂಗಳ  ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿವೆ.

ಹೊಸ ವರ್ಷದಿಂದ ವಾಹನಗಳ ಬೆಲೆಯನ್ನು ಹೆಚ್ಚಿಸಲು ಕಂಪೆನಿಗಳು ಮುಂದಾಗಿದ್ದೇ ವರ್ಷಾಂತ್ಯದ  ಮಾರಾಟ ಚೇತರಿಕೆಗೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ, ದೇಶದ ಅತಿ ದೊಡ್ಡ ವಾಹನ ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡಿದೆ. ಕಳೆದ ಏಳು ತಿಂಗಳಿಂದಲೂ ಸುಜುಕಿ ಮಾರಾಟ ಇಳಿಕೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಮಾರುತಿ ಸುಜುಕಿ ಮಾರಾಟ 89,469 ಕಾರುಗಳಿಂದ 77,475ಕ್ಕೆ ಇಳಿಕೆಯಾಗಿದ್ದು, ಶೇ 13ರಷ್ಟು ಕುಸಿತ ಕಂಡಿದೆ.

2011ರ ಕೊನೆಯ ತಿಂಗಳಲ್ಲಿ ದೇಶದ ಎರಡನೆಯ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಹುಂಡೈ ಮೋಟಾರ್ ಶೇ 12ರಷ್ಟು ಮಾರಾಟ ಪ್ರಗತಿ ದಾಖಲಿಸಿದ್ದು ಒಟ್ಟು 29,516 ವಾಹನಗಳನ್ನು ಮಾರಾಟ ಮಾಡಿದೆ. ಒಟ್ಟಾರೆ ಮಾರುಕಟ್ಟೆ ಪ್ರತಿಕೂಲವಾಗಿರುವ ಪ್ರಸಕ್ತ ಸಂದರ್ಭದಲ್ಲಿ ಇದು ಅನಿರೀಕ್ಷಿತ ಚೇತರಿಕೆ  ಎಂದು ಹುಂಡೈ ಮೋಟಾರ್‌ನ ನಿರ್ದೇಶಕ ಅರವಿಂದ ಸಕ್ಸೇನಾ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಟಾಟಾ ಮೋಟಾರ್ಸ್ ಮಾರಾಟ ಈ ಅವಧಿಯಲ್ಲಿ ಶೇ 47ರಷ್ಟು ಹೆಚ್ಚಿದೆ. ಕಂಪೆನಿ ಒಟ್ಟು 28,916 ವಾಹನಗಳನ್ನು ಮಾರಾಟ ಮಾಡಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿ ಮಾರಾಟವೂ ಶೇ 24ರಷ್ಟು ಏರಿಕೆ ಕಂಡಿದ್ದು,  19,341 ವಾಹನಗಳು ಮಾರಾಟವಾಗಿವೆ. ಟೋಯೊಟಾ ಕಿರ್ಲೋಸ್ಕರ್ ಮಾರಾಟದಲ್ಲಿ ದ್ವಿಗುಣ ಪ್ರಗತಿ ದಾಖಲಿಸಿದೆ. ಕಂಪೆನಿಯು ಕಳೆದ ವರ್ಷದ 6,362 ವಾಹನಗಳಿಗೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ 15,948 ವಾಹನಗಳನ್ನು ಮಾರಾಟ ಮಾಡಿದೆ. ಡಿಸೆಂಬರ್ ತಿಂಗಳಲ್ಲಿ 9,039 ಕಾರುಗಳನ್ನು ಮಾರಾಟ ಮಾಡಿರುವ ಜನರಲ್ ಮೋಟಾರ್ಸ್ ಇಂಡಿಯಾ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 7ರಷ್ಟು ಪ್ರಗತಿ ಕಂಡಿದೆ. ಷೆವರ್ಲೆ ಬೀಟ್, ಕ್ರೂಜ್, ಸ್ಪಾರ್ಕ್, ಟವೇರಾ ವಾಹನಗಳ ಬೇಡಿಕೆ ಹೆಚ್ಚಿರುವುದು ಏರಿಕೆಗೆ ಕಾರಣ  ಎಂದು ಕಂಪೆನಿಯ    ಉಪಾಧ್ಯಕ್ಷ ಪಿ. ಬಾಲೇಂದ್ರನ್ ತಿಳಿಸಿದ್ದಾರೆ.

ಫೋರ್ಡ್ ಇಂಡಿಯಾ ಶೆ 39ರಷ್ಟು ಮಾರಾಟ ಹೆಚ್ಚಳ ಕಂಡಿದೆ. ಒಟ್ಟು 5,979 ವಾಹನಗಳು ಈ ಅವಧಿಯಲ್ಲಿ ಮಾರಾಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.