ADVERTISEMENT

ಕಾರ್ಪೊರೇಟ್ ಫಲಿತಾಂಶ ನಿರ್ಣಾಯಕ

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 19:59 IST
Last Updated 7 ಜುಲೈ 2013, 19:59 IST
ಕಾರ್ಪೊರೇಟ್ ಫಲಿತಾಂಶ ನಿರ್ಣಾಯಕ
ಕಾರ್ಪೊರೇಟ್ ಫಲಿತಾಂಶ ನಿರ್ಣಾಯಕ   

ನವದೆಹಲಿ (ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಕುಸಿತ, ಮೇ ತಿಂಗಳ ಕೈಗಾರಿಕಾ ಪ್ರಗತಿ ಸೂಚ್ಯಂಕ (ಐಐಪಿ) ಮತ್ತು ಕಾರ್ಪೊರೇಟ್ ಕಂಪೆನಿಗಳ ಮೊದಲ ತ್ರೈಮಾಸಿಕ ಫಲಿತಾಂಶ ಈ ವಾರದ ವಹಿವಾಟು ನಿರ್ಧರಿಸಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ರೂಪಾಯಿ ಅಪಮೌಲ್ಯದಿಂದ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಒತ್ತಡ ಹೆಚ್ಚಿದೆ. ದೊಡ್ಡ ಪ್ರಮಾಣದಲ್ಲಿ ಷೇರುಪೇಟೆಯಿಂದ ಬಂಡವಾಳ ವಾಪಸ್ ಪಡೆದಿರುವ `ಎಫ್‌ಐಐ', ದೇಶದ ಮಾರುಕಟ್ಟೆಯಲ್ಲಿ ಅಸ್ಥಿರತೆ ಸೃಷ್ಟಿಸಿದ್ದಾರೆ.

ಜತೆಗೆ ಈಜಿಪ್ಟ್, ಪೂರ್ಚುಗಲ್ ಮತ್ತು ಗ್ರೀಸ್‌ನಲ್ಲಿನ ಆರ್ಥಿಕ ಬಿಕ್ಕಟ್ಟು ಕೂಡ ದೇಶದ ಷೇರುಪೇಟೆ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ಆದಿತ್ಯಾ ಟ್ರೇಡಿಂಗ್ ಸಲ್ಯೂಷನ್ಸ್ ಮುಖ್ಯಸ್ಥ ವಿಕಾಸ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ಇನ್ಫೊಸಿಸ್ ಸೇರಿದಂತೆ ಪ್ರಮುಖ ಕಾರ್ಪೊರೇಟ್ ಕಂಪೆನಿಗಳ ಮೊದಲ ತ್ರೈಮಾಸಿಕ ಫಲಿತಾಂಶ ಈ ವಾರ ಪ್ರಕಟವಾಗಲಿದೆ. ರೂಪಾಯಿ ಅಪಮೌಲ್ಯದಿಂದ ಬಾಂಡ್ ಖರೀದಿ ಚಟುವಟಿಕೆ ಕೂಡ ಹೆಚ್ಚಿದೆ. ಜತೆಗೆ `ಐಐಪಿ' ಮತ್ತು ಹಣದುಬ್ಬರ ಅಂಕಿ-ಅಂಶ ಕೂಡ ಈ ವಾರದ ವಹಿವಾಟಿನ ಮೇಲೆ ಪ್ರಭಾವ ಬೀರಬಲ್ಲವು ಎಂದು ಬೊನಾಂಜಾ ಪೋರ್ಟ್‌ಫೋಲಿಯೊ ಸಂಸ್ಥೆ ಹಿರಿಯ ಉಪಾಧ್ಯಕ್ಷ ರಾಕೇಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬರುವ ವಹಿವಾಟು ಅವಧಿಗಳಲ್ಲಿ ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ' 5,900 ಅಂಶಗಳನ್ನು ದಾಟುವುದು ಕಷ್ಟ ಎಂದು ಅವರು ಹೇಳಿದ್ದಾರೆ. ಇನ್ಫೊಸಿಸ್ ಜುಲೈ 12ರಂದು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ.

ಅಂದೇ `ಐಐಪಿ' ಮತ್ತು ಮೇ ತಿಂಗಳ ಗ್ರಾಹಕ ಸೂಚ್ಯಂಕ ಆಧರಿಸಿದ ಹಣದುಬ್ಬರ (ಸಿಪಿಐ) ದರ ಪ್ರಕಟಗೊಳ್ಳಲಿವೆ. ಮಾರುಕಟ್ಟೆ ದೃಷ್ಟಿಯಿಂದ ಈ ಮೂರು ಸಂಗತಿಗಳು ನಿರ್ಣಾಯಕ ಅಂಶಗಳು ಎಂದು `ಸಿಎನ್‌ಐ ರಿಸರ್ಚ್' ಸಂಸ್ಥೆ ವ್ಯವಸ್ಥಾಪಕ ಕಿಶೋರ್ ಪಿ.ಓಸ್ವಾಲ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.