ADVERTISEMENT

ಕಿಂಗ್‌ಫಿಷರ್ ನಷ್ಟ ರೂ 2,141 ಕೋಟಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ಮುಂಬೈ (ಪಿಟಿಐ): ಮಾರ್ಚ್ 31ಕ್ಕೆ ಕೊನೆಗೊಂಡ 2012-13ನೇ ಸಾಲಿನ ನಾಲ್ಕನೆಯ ತ್ರೈಮಾಸಿಕದಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್ ರೂ2,141 ಕೋಟಿ ನಿವ್ವಳ ನಷ್ಟ ಅನುಭವಿಸಿದೆ.

ಆರ್ಥಿಕ ಮುಗ್ಗಟ್ಟಿನಿಂದ ಕಳೆದ ಅಕ್ಟೋಬರ್1ರಿಂದ ಕಿಂಗ್‌ಫಿಷರ್ ಹಾರಾಟ ಸ್ಥಗಿತಗೊಂಡಿದೆ.  2011-12ನೇ ಸಾಲಿನ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಕಂಪೆನಿ ರೂ1,151 ಕೋಟಿ ನಿವ್ವಳ ನಷ್ಟ ಅನುಭವಿಸಿತ್ತು.

ಒಟ್ಟಾರೆ 2012-13ನೇ ಸಾಲಿನ ನಾಲ್ಕೂ ತ್ರೈಮಾಸಿಕಗಳು ಸೇರಿ ಕಂಪೆನಿ ರೂ4,001 ಕೋಟಿಯಷ್ಟು ನಷ್ಟ ಅನುಭವಿಸಿದೆ. 2011-12ನೇ ಸಾಲಿನಲ್ಲಿ ಒಟ್ಟಾರೆ ರೂ2,328 ಕೋಟಿಯಷ್ಟು ನಷ್ಟ ದಾಖಲಾಗಿತ್ತು ಎಂದು ಕಂಪೆನಿ ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಿಂಗ್‌ಫಿಷರ್‌ನ ಒಟ್ಟಾರೆ ಕಾರ್ಯನಿರ್ವಹಣೆ ನಷ್ಟ ರೂ16,023 ಕೋಟಿಗೆ ಏರಿಕೆ ಕಂಡಿದೆ.

ಹಾರಾಟ ಪರವಾನಗಿ ನವೀಕರಣ ಕೋರಿ ಕಿಂಗ್‌ಫಿಷರ್ ಕಳೆದ ತಿಂಗಳು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಪರಿಷ್ಕೃತ ಮನವಿ ಸಲ್ಲಿಸಿದೆ. ಆದರೆ, ಬ್ಯಾಂಕುಗಳು, ತೈಲ ಮಾರಾಟ ಕಂಪೆನಿಗಳು ಮತ್ತು ಹೂಡಿಕೆದಾರರಿಂದ ನಿರಾಕ್ಷೇಪಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ `ಡಿಜಿಸಿಎ' ಇನ್ನೂ ಪರವಾನಗಿ ನೀಡಿಲ್ಲ.

ರೂ7 ಸಾವಿರ ಕೋಟಿ ಸಾಲ
ಕಿಂಗ್‌ಫಿಷರ್ `ಎಸ್‌ಬಿಐ' ಸೇರಿದಂತೆ 17 ಬ್ಯಾಂಕುಗಳಿಗೆ ಒಟ್ಟು ರೂ7 ಸಾವಿರ ಕೋಟಿ ಸಾಲ ಪಾವತಿಸಬೇಕಿದೆ. ಇದರಲ್ಲಿ `ಎಸ್‌ಬಿಐ'ಗೆ ರೂ1,600 ಕೋಟಿ, `ಪಿಎನ್‌ಬಿ'ಗೆ ರೂ800 ಕೋಟಿ, `ಐಡಿಬಿಐ'ಗೆ ರೂ800 ಕೋಟಿ, ಬ್ಯಾಂಕ್ ಆಫ್ ಇಂಡಿಯಾಗೆ ರೂ650 ಕೋಟಿ ಮತ್ತು ಬ್ಯಾಂಕ್ ಆಫ್ ಬರೋಡಕ್ಕೆ ರೂ550 ಕೋಟಿ ಸಾಲ ಪಾವತಿಸಬೇಕಿದೆ.

ಇಲ್ಲಿಯವರೆಗೆ `ಎಸ್‌ಬಿಐ' ಸಮೂಹದ ಬ್ಯಾಂಕುಗಳು ಕಿಂಗ್‌ಫಿಷರ್‌ನಿಂದ ರೂ1 ಸಾವಿರ ಕೋಟಿಯಷ್ಟು ಸಾಲ ವಸೂಲಿ ಮಾಡಿವೆ ಎಂದು ಅಧ್ಯಕ್ಷ ಪ್ರತೀಪ್ ಚೌಧರಿ ತಿಳಿಸಿದ್ದಾರೆ.

ಮೂವರು ಅಧಿಕಾರಿಗಳ ರಾಜೀನಾಮೆ
ಮುಂಬೈ (ಪಿಟಿಐ): ಹತ್ತು ತಿಂಗಳಿನಿಂದ ವೇತನ ಪಾವತಿ ಮಾಡದ ಕಿಂಗ್‌ಫಿಷರ್ ಏರ್‌ಲೈನ್ಸ್ ಆಡಳಿತ ಮಂಡಳಿ ವಿರುದ್ಧ ಮತ್ತೆ ಹೋರಾಟ ಆರಂಭಿಸುವ ಬೆದರಿಕೆಯನ್ನು ಉದ್ಯೋಗಿಗಳು ಹಾಕಿರುವ ಬೆನ್ನಹಿಂದೆಯೇ ಏರ್‌ಲೈನ್ಸ್ ಮೂವರು ಹಿರಿಯ ಸಿಬ್ಬಂದಿ ಭಾನುವಾರ ರಾಜೀನಾಮೆ ನೀಡಿದ್ದಾರೆ.

ಮುಖ್ಯ ಮಾಹಿತಿ ಅಧಿಕಾರಿ ಸೌರವ್ ಸಿನ್ಹಾ, ವಿಮಾನ ಕಾರ್ಯಾಚರಣೆಯ ಮುಖ್ಯ ಕ್ಯಾಪ್ಟನ್ ರೋನಾಲ್ಡ್  ನಗರ್ ಹಾಗೂ ವಿಮಾನ ಸಿಬ್ಬಂದಿ ಮುಖ್ಯಸ್ಥ ಅಜಿತ್ ಭಾಗಚಂದಾನಿ ರಾಜೀನಾಮೆ ನೀಡಿದವರು ಎಂದು ಮೂಲಗಳು ತಿಳಿಸಿವೆ.

ಬಿಕ್ಕಟ್ಟು ಪರಿಹಾರವಾಗದ ಒಂದು ತಿಂಗಳಿನಿಂದ ಈಚೆಗೆ ಹಲವು ಪೈಲಟ್‌ಗಳು ಹಾಗೂ ಎಂಜಿನಿಯರ್‌ಗಳು ರಾಜೀನಾಮೆ ನೀಡಿದ್ದಾರೆ. ಈ ನಡುವೆ ಏರ್‌ಲೈನ್ಸ್‌ನ ಮುಂಬೈ ಮೂಲದ ಸಿಬ್ಬಂದಿ ವೇತನ ಪಾವತಿಗೆ ಆಗ್ರಹಿಸಿ ಮತ್ತೆ ಹೋರಾಟ ಆರಂಭಿಸುವ ಸಿದ್ಧತೆಯಲ್ಲಿದ್ದು ಸೋಮವಾರ ಈ ಸಂಬಂಧ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.