ADVERTISEMENT

ಕೃಷಿ ಸಾಲ: ಗುರಿ ಮೀರುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 18:30 IST
Last Updated 12 ಮಾರ್ಚ್ 2011, 18:30 IST

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆರೂ,3.74 ಲಕ್ಷ ಕೋಟಿ ಸಾಲವನ್ನು ಸರ್ಕಾರ ಅಂದಾಜಿಸಿದ್ದು, ಉದ್ದೇಶಿತ ಗುರಿ ಮೀರುವ ಸಾಧ್ಯತೆಗಳು ಹೆಚ್ಚಿವೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

‘ಕೃಷಿ ಕ್ಷೇತ್ರಕ್ಕೆ, ವಿಶೇಷವಾಗಿ ಅಲ್ಪಾವಧಿ ಬೆಳೆಗಳಿಗೆ ನೀಡುವ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ’ ಎಂದು ಅವರು ಇಲ್ಲಿ ನಡೆದ ಕಾರ್ಪೊರೇಷನ್ ಬ್ಯಾಂಕಿನ 106ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅಭಿಪ್ರಾಯಪಟ್ಟರು. ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ,3,75,000 ಕೋಟಿ ಕೃಷಿ ಸಾಲವನ್ನು ಸರ್ಕಾರ ನಿಗದಿಪಡಿಸಿದೆ. ಆದರೆ, ಡಿಸೆಂಬರ್ ವರೆಗಿನ ಅಂಕಿ ಅಂಶದಂತೆ ಸಾಲ ಪ್ರಮಾಣ ರೂ, 3 ಲಕ್ಷ ಕೋಟಿಯನ್ನು ದಾಟಿದೆ. ಇದು ಉದ್ದೇಶಿತ ಗುರಿಯನ್ನು ಮೀರುವ ಸಾಧ್ಯತೆ ಹೆಚ್ಚುವಂತೆ ಮಾಡಿದೆ ಎಂದರು. 

 ಬಡ್ಡಿ ರಿಯಾಯ್ತಿ ವಿಸ್ತರಣೆ: ರೈತರಿಗೆ  ಶೇ 7ರ ಬಡ್ಡಿ ದರದಲ್ಲಿ  ಅಲ್ಪಾವಧಿ ಕೃಷಿ ಸಾಲ ಲಭಿಸುವಂತೆ ಮಾಡಲು ಸರ್ಕಾರ 2006-07ರಿಂದ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ, ಪ್ರಾದೇಶಿಕ ಗಾಮೀಣ ಬ್ಯಾಂಕುಗಳಿಗೆ ಮತ್ತು ಸಹಕಾರಿ ಬ್ಯಾಂಕುಗಳಿಗೆ 3ಲಕ್ಷದ ವರೆಗಿನ ಸಾಲಕ್ಕೆ  ಬಡ್ಡಿ ರಿಯಾಯ್ತಿ ಘೋಷಿಸಿದೆ. 

   2010-11ನೇ ಸಾಲಿನಿಂದ ನಿರ್ದಿಷ್ಟ ಅವಧಿಯಲ್ಲಿ ಸಾಲ ಮರುಪಾವತಿಸುವ ರೈತರಿಗೆ ಹೆಚ್ಚುವರಿ ಶೇ 2ರಷ್ಟು ಬಡ್ಡಿರಿಯಾಯ್ತಿ ಲಭಿಸುತ್ತಿದೆ. 2011-12 ನೇ ಸಾಲಿನಲ್ಲಿ ಬಡ್ಡಿ  ರಿಯಾಯ್ತಿಯನ್ನು ಶೇ 3ಕ್ಕೆ ಹೆಚ್ಚಿಸುವ ಮೂಲಕ ರೈತರಿಗೆ ಶೇ 4ರ ಬಡ್ಡಿದರದಲ್ಲಿ ಕೃಷಿ ಸಾಲ ಲಭಿಸುವಂತೆ ಮಾಡಲಾಗುವುದು ಎಂದು ಪ್ರಣವ್ ಹೇಳಿದ್ದಾರೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.