ಧಾರವಾಡ: `ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ವ್ಯವಹಾರಗಳಲ್ಲಿ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಅಧ್ಯಕ್ಷರ ಬದಲಾವಣೆಯೂ ಸೇರಿದಂತೆ ಯಾವುದೇ ರೀತಿಯ ವ್ಯವಹಾರಗಳಲ್ಲಿ ಒಕ್ಕೂಟದ ನಿರ್ಣಯವೇ ಅಂತಿಮ' ಎಂದು ಪಶು ಸಂಗೋಪನೆ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದರು.
ನಗರಕ್ಕೆ ಶನಿವಾರ ಖಾಸಗಿ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೋಮಶೇಖರ ರೆಡ್ಡಿ ಅಧ್ಯಕ್ಷರಾಗಿರಬಹುದು. ಆದರೆ ಅವರನ್ನು ಬದಲಾಯಿಸಿ ನಮ್ಮ ಪಕ್ಷದ ಮುಖಂಡರನ್ನೇ ಅಧ್ಯಕ್ಷರನ್ನಾಗಿ ಮಾಡುವುದು ಸೇರಿದಂತೆ ಯಾವುದೇ ರೀತಿಯ ಹಸ್ತಕ್ಷೇಪವನ್ನು ಸರ್ಕಾರ ಮಾಡುವುದಿಲ್ಲ. ಆದರೆ, ಒಕ್ಕೂಟದ ಇಬ್ಬರು ವ್ಯವಸ್ಥಾಪಕ ನಿರ್ದೇಶಕರು ವಜಾಗೊಂಡರು. ಪದೇ ಪದೇ ಇಂತಹ ಘಟನೆಗಳಿಂದ ಆಡಳಿತಾತ್ಮಕ ಸಮಸ್ಯೆಗಳು ತಲೆದೋರಲಿದ್ದು, ಶಾಶ್ವತ ವ್ಯವಸ್ಥಾಪಕ ನಿರ್ದೇಶಕರ ಅಗತ್ಯವಿದೆ. ಈ ಸಂಬಂಧ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ' ಎಂದರು.
`ಹಾಸನ ಹಾಗೂ ಶಿವಮೊಗ್ಗ ಪಶುವೈದ್ಯಕೀಯ ಕಾಲೇಜುಗಳು ಮೂಲಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ಭಾರತ ಪಶು ವೈದ್ಯಕೀಯ ಪರಿಷತ್ತು ಮಾನ್ಯತೆ ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ, ಇನ್ನಷ್ಟು ಕಾಲಾವಕಾಶ ಕಲ್ಪಿಸಬೇಕಿದೆ. ಭಾನುವಾರ ದೆಹಲಿಗೆ ತೆರಳಿ ಕೇಂದ್ರ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಈ ವಿಷಯವನ್ನು ಅವರಿಗೆ ತಿಳಿಸುತ್ತೇನೆ' ಎಂದರು.
`ಪಶುಸಂಗೋಪನೆ ಇಲಾಖೆಯನ್ನು ಸಧೃಡಗೊಳಿಸಲು ಖಾಸಗಿ ಡೇರಿ ಸಹಭಾಗಿತ್ವ ಪಡೆಯಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಆ ಮೂಲಕ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಪ್ರತಿ ಲೀಟರ್ ಹಾಲಿಗೆ 4 ರೂಪಾಯಿ ಸಹಾಯಧನ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್‌ನಲ್ಲಿ ್ಙ850 ಕೋಟಿ ಮೀಸಲಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ' ಎಂದರು.
ಹೈಕೋರ್ಟ್‌ನ 51 ನ್ಯಾಯಮೂರ್ತಿಗಳ ಪೈಕಿ 16 ಹುದ್ದೆಗಳು ಖಾಲಿ ಇವೆ. ಜಿಲ್ಲಾ ನ್ಯಾಯಾಲಯಗಳಲ್ಲೂ ಹಲವು ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ. ಶೀಘ್ರವೇ ಆ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.