ADVERTISEMENT

ಕೆನರಾ ಬ್ಯಾಂಕ್: ರೂ 875 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ಬೆಂಗಳೂರು: ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಡಿಸೆಂಬರ್ ತಿಂಗಳಾಂತ್ಯಕ್ಕೆ ಕೊನೆಗೊಂಡ ತೃತೀಯ ತ್ರೈಮಾಸಿಕದಲ್ಲಿ ರೂ 875.56 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ದೇಶಿ ಬ್ಯಾಂಕಿಂಗ್ ಉದ್ದಿಮೆಯು ಕಠಿಣ ಹಣಕಾಸು ಪರಿಸ್ಥಿತಿ ಎದುರಿಸುತ್ತಿದೆ. ಇದಕ್ಕೆ ಕೆನರಾ ಬ್ಯಾಂಕ್ ಕೂಡ ಹೊರತಲ್ಲ. ಹೀಗಾಗಿ ಕಳೆದ ವರ್ಷದ ಇದೇ ಅವಧಿಯಲ್ಲಿನ ರೂ 1,105 ಕೋಟಿಗಳಷ್ಟು ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 21ರಷ್ಟು ಕಡಿಮೆ ಆಗಿದೆ. ವಸೂಲಾಗದ ಸಾಲದ ಪ್ರಮಾಣ ಹೆಚ್ಚಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಎಸ್. ರಾಮನ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿವ್ವಳ ಬಡ್ಡಿ ವರಮಾನವು ಕೂಡ ಕಳೆದ ವರ್ಷದ ಇದೇ ಅವಧಿಯಲ್ಲಿನ ರೂ 2,119 ಕೋಟಿಗಳಿಗೆ ಹೋಲಿಸಿದರೆ ಶೇ  9.5ರಷ್ಟು ಕಡಿಮೆಯಾಗಿ ರೂ 1,918 ಕೋಟಿಗಳಷ್ಟಾಗಿದೆ.

ಸಂಪನ್ಮೂಲ ದೃಷ್ಟಿಯಿಂದ ಬ್ಯಾಂಕ್‌ನ ಹಣಕಾಸು ಪರಿಸ್ಥಿತಿ ಸದೃಢವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) ಶೇ 0.50ರಷ್ಟು ಕಡಿಮೆ ಮಾಡಿರುವುದರಿಂದ ಮುಂಬರುವ ದಿನಗಳಲ್ಲಿ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದರಗಳು ಕಡಿಮೆಯಾಗಬಹುದು. ಇದರಿಂದ ಒಟ್ಟಾರೆ ಬ್ಯಾಂಕಿಂಗ್ ವ್ಯವಸ್ಥೆ ಮೇಲಿನ ಒತ್ತಡ ದೂರವಾಗಬಹುದು ಎಂದರು.

ಬ್ಯಾಂಕ್‌ನ ಒಟ್ಟು ಜಾಗತಿಕ ವಹಿವಾಟು ರೂ 5,34,710 ಕೋಟಿಗಳಷ್ಟಾಗಿದೆ. ದೇಶಿ ವಹಿವಾಟು ಶೇ 17.7ರಷ್ಟು ಹೆಚ್ಚಳಗೊಂಡಿದ್ದು, ಬ್ಯಾಂಕಿಂಗ್ ವಲಯದ ಸರಾಸರಿ ಮಟ್ಟವಾದ ಶೇ 16.5ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದೆ.

ಬ್ಯಾಂಕ್, ಒಟ್ಟು 2.06 ಲಕ್ಷ ವಿದ್ಯಾರ್ಥಿಗಳಿಗೆ ರೂ 3,898 ಕೋಟಿಗಳಷ್ಟು ಸಾಲ ವಿತರಿಸಿದೆ. ಇದು ಶೇ 14ರಷ್ಟು ವೃದ್ಧಿ ಕಂಡಿದೆ. ಶಿಕ್ಷಣ ಸಾಲ ನೀಡುವಲ್ಲಿ ಬ್ಯಾಂಕ್, ಇತರ ಬ್ಯಾಂಕ್‌ಗಳಿಗೆ ಹೋಲಿಸಿದರೆ ಮೊದಲ ಸ್ಥಾನದಲ್ಲಿ ಇದೆ. ಕೃಷಿ ರಂಗಕ್ಕೆ ನೀಡುವ ಸಾಲದ ಪ್ರಮಾಣವು ರೂ 31,179 ಕೋಟಿಗಳಷ್ಟಾಗಿ ಶೇ 15ರಷ್ಟು ಏರಿಕೆ ದಾಖಲಿಸಿದೆ ಎಂದರು.

ಈ ತ್ರೈಮಾಸಿಕದಲ್ಲಿ ಹಣಕಾಸಿನ ಎಲ್ಲ ಮಾನದಂಡಗಳ ಲೆಕ್ಕದಲ್ಲಿ ಬ್ಯಾಂಕ್‌ನ ಸಾಧನೆಯು ಈ ಹಿಂದಿನ ತ್ರೈಮಾಸಿಕಗಳಿಗೆ ಹೋಲಿಸಿದರೆ ಕಡಿಮೆಯಾಗಿರುವುದಕ್ಕೆ ವಸೂಲಾಗದ ಸಾಲದ ಪ್ರಮಾಣ ಹೆಚ್ಚಳ, ದುಬಾರಿ ಬಡ್ಡಿ ದರ ಮತ್ತಿತರ ವಿದ್ಯಮಾನಗಳು ಕಾರಣ. ಈ ಕುಸಿತದ  ಪ್ರಮಾಣವು  ಕ್ರಮೇಣ ಕಡಿಮೆಯಾಗುತ್ತಿದೆ ಎಂದು ರಾಮನ್ ನುಡಿದರು.

ತೃತೀಯ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್‌ನ ಒಟ್ಟು ವರಮಾನವು  ಶೇ 33ರಷ್ಟು ಹೆಚ್ಚಳಗೊಂಡು ರೂ 8,591 ಕೋಟಿಗಳಷ್ಟಾಗಿದೆ.

ವಿಸ್ತರಣೆ: ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯಲು 150 ಗ್ರಾಮೀಣ ಮತ್ತು ಅರೆ ನಗರ ಶಾಖೆಗಳನ್ನು ಆರಂಭಿಸಲಾಗಿದೆ. ಕಳೆದ 9 ತಿಂಗಳಲ್ಲಿ 27 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ.

ಕಳೆದ ಒಂದು ವರ್ಷದಲ್ಲಿ 395 ಹೊಸ ಶಾಖೆಗಳು ಮತ್ತು 519 ಎಟಿಎಂಗಳನ್ನು ಆರಂಭಿಸಲಾಗಿದೆ ಎಂದೂ ರಾಮನ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.