ADVERTISEMENT

ಕೈಗಾರಿಕಾ ವೃದ್ಧಿ: ನಿರಾಶಾದಾಯಕ ಪ್ರಗತಿ.

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ನವದೆಹಲಿ (ಪಿಟಿಐ): ಡಿಸೆಂಬರ್ 2010ಕ್ಕೆ ಕೊನೆಗೊಂಡಂತೆ ದೇಶದ ಒಟ್ಟು ಕೈಗಾರಿಕಾ ಬೆಳವಣಿಗೆ ಶೇ 1.6ರಷ್ಟು ಮಾತ್ರ ಪ್ರಗತಿ ದಾಖಲಿಸಿ,ರೂದ  20 ತಿಂಗಳ ಹಿಂದಿನ ಮಟ್ಟಕ್ಕೆ ಇಳಿದಿದೆ ಎಂದು ಯೋಜನಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ  ಕೈಗಾರಿಕಾ ವೃದ್ಧಿ ದರವು ಮಂದಗತಿಯ ಪ್ರಗತಿಯಲ್ಲಿ ಇರುವುದು ದೇಶದ ಉದ್ದೇಶಿತ ‘ಜಿಡಿಪಿ’ ಗುರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.‘ಕಳೆದ ವರ್ಷಕ್ಕೆ ಹೋಲಿಸಿದರೆ ಇದು ನಿರಾಶದಾಯಕ ಮತ್ತು ದುರದೃಷ್ಟಕರ ಪ್ರಗತಿ’ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಕೈಗಾರಿಕಾ ಸೂಚ್ಯಂಕ (ಐಐಪಿ) ಶೇ 18ರಷ್ಟು ವೃದ್ಧಿ ದಾಖಲಿಸಿತ್ತು. ಆದರೆ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಕೈಗಾರಿಕಾ ಬೆಳವಣಿಗೆ ಶೇ 8.6ಕ್ಕೆ ಸ್ಥಿರಗೊಂಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವೃದ್ಧಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನವೆಂಬರ್ ತಿಂಗಳಲ್ಲಿ ಶೇ 2.7ರಷ್ಟು ಕೈಗಾರಿಕಾ ಸೂಚ್ಯಂಕ  ಅಂದಾಜಿಸಲಾಗಿತ್ತು. ಇದು ಮಾತ್ರ ಶೇ 3.6ಕ್ಕೆ ಏರಿಕೆ ಕಂಡಿದೆ.

ದೇಶದ ಒಟ್ಟು ಕೈಗಾರಿಕಾ ಬೆಳವಣಿಗೆಗೆ ಶೇ 80ರಷ್ಟು ಕೊಡುಗೆ ನೀಡುವ ತಯಾರಿಕಾ ಕ್ಷೇತ್ರ ಈ ಅವಧಿಯಲ್ಲಿ ಶೇ 1ರಷ್ಟು ಮಾತ್ರ ವೃದ್ಧಿ ಕಾಣುವಲ್ಲಿ ಯಶಸ್ವಿಯಾಗಿದೆ. ಭಾರಿ ಯಂತ್ರೋಪಕರಣ ಕ್ಷೇತ್ರ ಶೇ 13ರಷ್ಟು ಋಣಾತ್ಮಕ ಪ್ರಗತಿ ದಾಖಲಿಸಿದೆ. ‘ಹಣಕಾಸು ವರ್ಷದ ಅಂತ್ಯಕ್ಕೆ ಶೇ 8.5ರಷ್ಟು ಆರ್ಥಿಕ ವೃದ್ಧಿ ದರ (ಜಿಡಿಪಿ) ಮತ್ತು ಶೇ 8ರಷ್ಟು ಕೈಗಾರಿಕಾ ಪ್ರಗತಿ ನಿರೀಕ್ಷಿಸಲಾಗಿದೆ.  ಈ ಗುರಿ ತಲುಪಲು ಈಗಿನ ಬೆಳವಣಿಗೆಯೇ  ಸಾಕು’ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಶೇ 11ರಷ್ಟಿದ್ದ ಗಣಿ ಬೆಳವಣಿಗೆ ದರ ಈ ಬಾರಿ ಶೇ 3.8ರಷ್ಟು ಕುಸಿತ ಕಂಡಿದೆ.  ಶೇ 5.4ರಷ್ಟಿದ್ದ ವಿದ್ಯುತ್ ಉತ್ಪಾದನೆ ಶೇ 6ಕ್ಕೆ ಪ್ರಗತಿ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.