ADVERTISEMENT

ಕೈಗಾರಿಕೆ ವಲಯ: ಗರಿಷ್ಠ ಪ್ರಗತಿ

ಕೈಗಾರಿಕೆ ವಲಯ: ಗರಿಷ್ಠ ಪ್ರಗತಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ನವದೆಹಲಿ (ಪಿಟಿಐ):  ದೇಶದ ಕೈಗಾರಿಕಾ ಪ್ರಗತಿ ಸೂಚ್ಯಂಕವು (ಐಐಪಿ) ಅಕ್ಟೋಬರ್‌ನಲ್ಲಿ ಕಳೆದ 16 ತಿಂಗಳಲ್ಲೇ ಗರಿಷ್ಠ ಮಟ್ಟವಾದ ಶೇ 8.2 ತಲುಪಿದೆ. `ಐಐಪಿ' ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಿನ ತ್ರೈಮಾಸಿಕ ಹಣಕಾಸು ಪರಾಮರ್ಷೆಯಲ್ಲಿ ಅಲ್ಪಾವಧಿ ಬಡ್ಡಿ ದರ ತಗ್ಗಿಸಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳಿಂದ ತಯಾರಿಕೆ, ವಿದ್ಯುತ್ ಮತ್ತು ಗ್ರಾಹಕ ವಲಯಗಳಲ್ಲಿ ದಿಢೀರ್ ಚೇತರಿಕೆ ಕಂಡುಬಂದಿದೆ. ಇದು ಒಟ್ಟಾರೆ `ಐಐಪಿ' ಏರಿಕೆಗೆ ಪ್ರಮುಖ ಕಾರಣ ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

`ಐಐಪಿ'ಗೆ ಶೇ 75ರಷ್ಟು ಕೊಡುಗೆ ನೀಡುವ ತಯಾರಿಕಾ ವಲಯ ಅಕ್ಟೋಬರ್ ತಿಂಗಳಲ್ಲಿ ಶೇ 9.6ರಷ್ಟು ಗಮನಾರ್ಹ ಪ್ರಗತಿ ಕಂಡಿದೆ. ಕಟ್ಟಡ ನಿರ್ಮಾಣ ಚೇತರಿಕೆ ಕಂಡಿರುವುದರಿಂದ ಭಾರಿ ಯಂತ್ರೋಪಕರಣಗಳ ವಲಯ ಶೇ 7.5ರಷ್ಟು ಪ್ರಗತಿ ದಾಖಲಿಸಿದೆ. ವಿದ್ಯುತ್ ಉತ್ಪಾದನೆ ಶೇ 5.5ರಷ್ಟು ಹೆಚ್ಚಿದೆ. ಗ್ರಾಹಕ ಸರಕುಗಳ ವಿಭಾಗ ಶೇ 13.2ರಷ್ಟು ಏರಿಕೆ ಕಂಡಿದೆ.

ಒಟ್ಟಾರೆ 22 ಉದ್ಯಮಗಳಲ್ಲಿ 17 ಉದ್ಯಮಗಳು ಪ್ರಗತಿ ಕಂಡಿವೆ. ಕಳೆದ ಅಕ್ಟೋಬರ್‌ನಲ್ಲಿ ಶೇ 5ರಷ್ಟು `ಐಐಪಿ' ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.