ADVERTISEMENT

ಕೈಗಾ: ದಾಖಲೆ ವಿದ್ಯುತ್ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಕಾರವಾರ:  ಭಾರತೀಯ ಅಣುಶಕ್ತಿ ನಿಗಮವು ದೇಶದಾದ್ಯಂತ ಹೊಂದಿರುವ 19 ಅಣು ಸ್ಥಾವರಗಳು ಕಳೆದ ಆರ್ಥಿಕ ವರ್ಷದಲ್ಲಿ (2011-12) ಒಟ್ಟು 32,455 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿವೆ. ಇಷ್ಟು ವರ್ಷಗಳಲ್ಲಿ ಇದು ದಾಖಲೆಯ ಉತ್ಪಾದನೆ ಆಗಿದೆ.

ತಾಲ್ಲೂಕಿನ ಕೈಗಾದಲ್ಲಿರುವ ಕೈಗಾ ಅಣು ವಿದ್ಯುತ್ ಸ್ಥಾವರದ ನಾಲ್ಕು ಘಟಕಗಳು 5,215 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ. ಇದು ನಿಗದಿಪಡಿಸಿದ (4,332 ದಶಲಕ್ಷ ಯೂನಿಟ್) ಗುರಿಗಿಂತಲೂ ಅಧಿಕವಾಗಿದೆ ಎಂದು ಅಣು ಸ್ಥಾವರದ ಸ್ಥಾನಿಕ ನಿರ್ದೇಶಕ ಜೆ.ಪಿ.ಗುಪ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತಮ ಪ್ರಗತಿ ತೋರಿದ ಹಿನ್ನೆಲೆಯಲ್ಲಿ ಅಣುಶಕ್ತಿ ನಿಯಂತ್ರಣ ಮಂಡಳಿಯು ಕೈಗಾದ 3 ಮತ್ತು 4ನೇ ಘಟಕಕ್ಕೆ `ಇಂಡಸ್ಟ್ರೀಯಲ್ ಅಂಡ್ ಫೈರ್ ಸೇಫ್ಟಿ~ ಪ್ರಶಸ್ತಿ ನೀಡಿದೆ ಎಂದು ಗುಪ್ತಾ ಹರ್ಷ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 11ರ ಸುಮಾರಿಗೆ ವಿದ್ಯುತ್ ವಿತರಣಾ ಜಾಲದಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಾವರದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.

ಈ ಸಂದರ್ಭದಲ್ಲಿ ಉತ್ಪಾದನೆಯಾದ ವಿದ್ಯುತ್‌ನಲ್ಲಿ ಸ್ಥಾವರ ನಿರ್ವಹಣೆಗೆ ಬೇಕಾಗುವಷ್ಟು ವಿದ್ಯುತ್ ಮಾತ್ರ ಬಳಸಿಕೊಂಡು ಸ್ಥಾವರಗಳು ಸ್ಥಗಿತಗೊಳ್ಳದಂತೆ ನೋಡಿಕೊಳ್ಳಲಾಯಿತು. ಎರಡು ಗಂಟೆ ಬಳಿಕ ದುರಸ್ತಿಗೊಂಡ ನಂತರ ಪುನಃ ಜಾಲಕ್ಕೆ ವಿದ್ಯುತ್ ಹರಿಸಲಾಯಿತು ಎಂದು  ಅವರು ಹೇಳಿದ್ದಾರೆ.

ಕೈಗಾದ ನಾಲ್ಕೂ ಘಟಕಗಳು ತೃಪ್ತಿಕರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಒಟ್ಟು 650 ಮೆ.ವಾ ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ಉತ್ಪಾದನೆಯಾದ ವಿದ್ಯುತ್  ದಕ್ಷಿಣ ಗ್ರೀಡ್‌ಗೆ ಸೇರ್ಪಡೆಯಾಗುತ್ತದೆ ಎಂದು ಗುಪ್ತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.