ADVERTISEMENT

ಖಾತೆಗೆ `ಆಧಾರ್' ಸಂಖ್ಯೆ ಜೋಡಣೆ

ಗ್ರಾಹಕರಿಗೆ ಬ್ಯಾಂಕ್‌ಗಳಿಂದ ಎಸ್‌ಎಂಎಸ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ನವದೆಹಲಿ(ಪಿಟಿಐ): ಅಡುಗೆ ಅನಿಲ ಸಬ್ಸಿಡಿ ಸೇರಿದಂತೆ ಸರ್ಕಾರದ ವಿವಿಧ ಆರ್ಥಿಕ ನೆರವನ್ನು `ನೇರ  ಸೌಲಭ್ಯ ವರ್ಗಾವಣೆ' (ಡಿಬಿಟಿ) ವ್ಯವಸ್ಥೆಯಡಿ  `ಆಧಾರ್' ಸಂಖ್ಯೆಯನ್ನು ಗ್ರಾಹಕರ ಖಾತೆಗೆ ಜೋಡಿಸುವ ಕೆಲಸವನ್ನು ಬ್ಯಾಂಕ್‌ಗಳು ಈಗಾಗಲೇ ಆರಂಭಿಸಿವೆ.

ಈ ಕುರಿತು ಕೇಂದ್ರ ಹಣಕಾಸು ಸಚಿವ  ಪಿ.ಚಿದಂಬರಂ ಅವರು ತಿಂಗಳ ಆರಂಭದಲ್ಲಿ ಸ್ಪಷ್ಟ ನಿರ್ದೇಶನ  ನೀಡುತ್ತಿದ್ದರು. ನಂತರ ಚುರುಕಾದ ಬ್ಯಾಂಕ್‌ಗಳು ಗ್ರಾಹಕರಿಗೆ `ಆಧಾರ್' ಸಂಖ್ಯೆಯನ್ನು ತಕ್ಷಣ ಒದಗಿಸುವಂತೆ ಉಳಿದ ಗ್ರಾಹಕರನ್ನೂ ಕೋರಿವೆ. ಎಸ್‌ಎಂಎಸ್, ಎಟಿಎಂ ಮೂಲಕ ಈ ಕುರಿತು ಗ್ರಾಹಕರ ಗಮನ ಸೆಳೆಯುತ್ತಿವೆ.

ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೂಲಿ ಮೊತ್ತ ಸೇರಿದಂತೆ ಕೇಂದ್ರ ಸರ್ಕಾರ ನೀಡುವ ವಿವಿಧ ಆರ್ಥಿಕ ನೆರವನ್ನು ನೇರವಾಗಿ ನಿಮ್ಮ ಖಾತೆಗೆ ವರ್ಗಾಯಿಸಬೇಕಿದೆ. ಅದಕ್ಕಾಗಿ `ಆಧಾರ್' ಸಂಖ್ಯೆಯನ್ನು ತಕ್ಷಣ ನಿಮ್ಮ ಖಾತೆ ಇರುವ ಬ್ಯಾಂಕ್ ಶಾಖೆಗೆ ನೀಡಿರಿ ಎಂಬ `ಎಸ್‌ಎಂಎಸ್' ಜಾಗೃತಿ ಅಭಿಯಾನವನ್ನು ಕೆನರಾ ಬ್ಯಾಂಕ್ ಆರಂಭಿಸಿದೆ.

ಕೇಂದ್ರ ಸರ್ಕಾರದ `ಡಿಬಿಟಿ' ಸೇವೆ ಮೊದಲ ಹಂತದಲ್ಲಿ 43 ಜಿಲ್ಲೆಗಳಲ್ಲಿ ಮೇ 15ಕ್ಕೂ ಮುನ್ನ ಜಾರಿಗೆ ಬರಲಿದೆ. ವರ್ಷಕ್ಕೆ ಪ್ರತಿ ಕುಟುಂಬಕ್ಕೆ ರೂ.4000 ಎಲ್‌ಪಿಜಿ ಸಬ್ಸಿಡಿ ದೊರೆಯಲಿದೆ. ಈ ಮೊತ್ತ ಆಧಾರ್ ಸಂಖ್ಯೆ ಜೋಡಿಸಿದ ಕುಟುಂಬದ ಯಜಮಾನನ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ. ಎಲ್‌ಪಿಜಿ ಗ್ರಾಹಕರು 14.2 ಕೆ.ಜಿ ಸಿಲಿಂಡರ್ ಮನೆಗೆ ಸರಬರಾಜು ಆದಾಗ ಮಾರುಕಟ್ಟೆ ದರವನ್ನೇ (ನವದೆಹಲಿ ರೂ.901.50) ಪಾವತಿಸಬೇಕಿದೆ.

ಸದ್ಯ ದೇಶದಲ್ಲಿ 14 ಕೋಟಿ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿದ್ದಾರೆ. ಪ್ರತಿ ಕುಟುಂಬಕ್ಕೆ ಒಂದು ವರ್ಷಕ್ಕೆ 9 ಸಿಲಿಂಡರ್‌ಗಳಿಗಷ್ಟೇ(ತಲಾ ರೂ.435) ಸಬ್ಸಿಡಿ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.