ADVERTISEMENT

ಖಾದ್ಯತೈಲ ರಫ್ತು ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 19:30 IST
Last Updated 2 ಆಗಸ್ಟ್ 2012, 19:30 IST

ನವದೆಹಲಿ(ಪಿಡಿಐ): ಐದು ಕೆ.ಜಿ.ವರೆಗಿನ ಬ್ರಾಂಡೆಡ್ ಖಾದ್ಯ ತೈಲದ ಪೊಟ್ಟಣಗಳ ರಫ್ತು ಚಟುವಟಿಕೆಗೆ ಬುಧವಾರ ದಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.

ಮುಂಗಾರು ಕುಂಠಿತಗೊಂಡಿರುವ ಕಾರಣ, ಖಾದ್ಯತೈಲ ಬೀಜಗಳ ಬಿತ್ತನೆ ಕಡಿಮೆ ಆಗಿರುವುದರಿಂದ ಎಣ್ಣೆ ಕಾಳುಗಳ ಉತ್ಪಾದನೆಯೂ ಗಣನೀಯವಾಗಿ ತಗ್ಗಲಿದೆ. ಇದು ದೇಶದ ಖಾದ್ಯತೈಲ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಪರಿಣಾಮ ಬೆಲೆಯೂ ಹೆಚ್ಚಲಿದೆ ಎಂಬ ಬಗ್ಗೆ ಗಂಭೀರ ನೋಟ ಹರಿಸಿರುವ ಕೇಂದ್ರ ಸರ್ಕಾರ, ಮುಜಾಗರೂಕತಾ ಕ್ರಮವಾಗಿ ಈ ಕ್ರಮ ಕೈಗೊಂಡಿದೆ.

ಪ್ಯಾಕ್ ಮಾಡಿದ (ಐದು ಕೆ.ಜಿ.ವರೆಗಿನದು) ಖಾದ್ಯ ತೈಲದ ರಫ್ತನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ ಎಂದು ವಿದೇಶ ವ್ಯಾಪಾರದ ಮಹಾ ನಿರ್ದೇಶನಾಲಯ(ಡಿಜಿಎಫ್‌ಟಿ) ಬುಧವಾರ ಅಧಿಸೂಚನೆ ಹೊರಡಿಸಿದೆ.

2011ರ ನವೆಂಬರ್ 1ರಿಂದ 2012ರ ಅಕ್ಟೋಬರ್ 31ರವರೆಗೆ ಒಟ್ಟು 10 ಸಾವಿರ ಟನ್ (ಪ್ಯಾಕ್ ಮಾಡಿದ್ದು) ಖಾದ್ಯ ತೈಲವನ್ನು ರಫ್ತು ಮಾಡಲು ಈ ಮೊದಲೇ ಅನುಮತಿ ನೀಡಲಾಗಿದ್ದಿತು.
ವಾಸ್ತವವಾಗಿ ದೇಶದ ಜನರ ಖಾದ್ಯತೈಲ ಬೇಡಿಕೆಯನ್ನು ದೇಶೀಯ ಮಾರುಕಟ್ಟೆಗೆ ಪೂರೈಸಲು ಸಾಧ್ಯವಾಗುತ್ತಲೇ ಇಲ್ಲ.

ಹಾಗಾಗಿ 90 ಲಕ್ಷ ಟನ್ ಖಾದ್ಯತೈಲವನ್ನು ಹಲವು ವರ್ಷಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದ ಅಡುಗೆ ಎಣ್ಣೆ ರಫ್ತು ಪ್ರಮಾಣ ಬಹಳ ಅತ್ಯಲ್ಪ ಪ್ರಮಾಣದ್ದು. ಈಗ ವಿಧಿಸಿರುವ ರಫ್ತು ನಿರ್ಬಂಧದಿಂದ ಹೆಚ್ಚಿನ ಪ್ರಯೋಜನವೇನೂ ಆಗದು ಎಂದು ಖಾದ್ಯತೈಲ ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

ಬಿತ್ತನೆ ಸಾಧಾರಣ: ಇನ್ನೊಂದೆಡೆ ಮುಂಗಾರು ದುರ್ಬಲಗೊಂಡಿದೆ. ಪರಿಣಾಮ, ಜುಲೈ 27ರವರೆಗೆ ದೇಶದಲ್ಲಿ ಒಟ್ಟು 1.83 ಕೋಟಿ ಹೆಕ್ಟೇರ್‌ನಲ್ಲಿ ಎಣ್ಣೆ ಕಾಳುಗಳ ಬಿತ್ತನೆ ಆಗಿದೆ. ಇದು ಕಳೆದ ವರ್ಷದ ಬಿತ್ತನೆಗೆ ಹೋಲಿಸಿದರೆ ಬಹುತೇಕ ಅಷ್ಟೇ ಪ್ರಮಾಣದ್ದಾಗಿದೆ.  ಇದರಲ್ಲಿ ಕಡಿಮೆ ಜಿಡ್ಡಿನಂಶದ ಸೋಯಾ ಅವರೆ ಬಿತ್ತನೆ ಪ್ರಮಾಣವೇ ಹೆಚ್ಚಿನದಾಗಿದೆ. 94 ಲಕ್ಷ ಹೆಕ್ಟೇರ್‌ಗೆ ಬದಲು 1.01 ಕೋಟಿ ಹೆಕ್ಟೇರ್‌ನಲ್ಲಿ ಸೋಯಾ ಬಿತ್ತಲಾಗಿದೆ.

ಆದರೆ, ಎಣ್ಣೆಕಾಳು ಉತ್ಪಾದನೆಯ ಪ್ರಮುಖ ರಾಜ್ಯಗಳಾದ ಗುಜರಾತ್, ಕರ್ನಾಟಕ ಮತ್ತು ರಾಜಸ್ತಾನದಲ್ಲಿ ಈ ಬಾರಿ ನೆಲಗಡಲೆ ಬಿತ್ತನೆ ಪ್ರಮಾಣ ನಿರೀಕ್ಷೆಗಿಂತ ಕಡಿಮೆ ಇರುವುದು ಕೇಂದ್ರ ಸರ್ಕಾರದ ಕಳವಳಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.