ADVERTISEMENT

ಖಾಸಗಿ ದೂರಸಂಪರ್ಕ ಕಂಪೆನಿ ಲೆಕ್ಕ ಪರಿಶೋಧನೆ ಅಧಿಕಾರ ಸಿಎಜಿಗೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ನವದೆಹಲಿ (ಪಿಟಿಐ):  ಮಹಾಲೇಖ­ಪಾಲರಿಗೆ (ಸಿಎಜಿ) ಖಾಸಗಿ ದೂರ ಸಂಪರ್ಕ ಕಂಪೆನಿಗಳ ಲೆಕ್ಕಪತ್ರವನ್ನು ಪರಿಶೋಧಿಸುವ ಅಧಿಕಾರ ಇದೆ ಎಂದು ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಪ್ರದೀಪ್‌ ನಂದರಜೋಗ್‌ ಮತ್ತು ಪಿ. ಕಾಮೇಶ್ವರ್‌ ರಾವ್‌ ಅವರನ್ನೊಳಗೊಂಡ ಪೀಠ, ಭಾರತೀಯ ದೂರ ಸಂಪರ್ಕ ನಿಯಂತ್ರಣ (ಟ್ರಾಯ್‌) ಕಾಯ್ದೆ ಪ್ರಕಾರ ಖಾಸಗಿ ದೂರ ಸಂಪರ್ಕ ಸಂಸ್ಥೆಗಳ ಲೆಕ್ಕಪತ್ರ ಪರಿಶೋಧನೆಗೆ ಮಹಾಲೇಖಪಾಲರಿಗೆ ಅನುಮತಿ ನೀಡಿದೆ.

ದೂರ ಸಂಪರ್ಕ ನ್ಯಾಯ ಮಂಡಲಿಯು (ಟ್ರಿಬ್ಯುನಲ್‌) 2010ರಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಏಕೀಕೃತ ದೂರ ಸಂಪರ್ಕ ಸೇವಾದಾರರ ಸಂಘ (ಎಯುಎಸ್‌ಪಿಐ) ಮತ್ತು ಭಾರತೀಯ ಮೊಬೈಲ್‌ ನಿರ್ವಾಹಕರ ಸಂಘ (ಸಿಒಎಐ) ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಪೀಠ ವಜಾಗೊಳಿಸಿದೆ.

ಕೇಂದ್ರ ಸರ್ಕಾರ, ಮಹಾಲೇಖಪಾಲರು ಮತ್ತು ದೂರುದಾರರ ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ಪೀಠ ಈ ತೀರ್ಪು ನೀಡಿದೆ.
ಮಹಾಲೇಖಪಾಲರು ಖಾಸಗಿ ಕಂಪೆನಿಗಳ ಲೆಕ್ಕ ಪರಿಶೋಧನೆ ಮಾಡುವಂತಿಲ್ಲ ಎಂದು ದೂರು ನೀಡಿರುವ ಎರಡೂ ಸಂಘಟನೆಗಳು ವಾದಿಸಿದ್ದವು.

ದೂರಸಂಪರ್ಕ ಇಲಾಖೆ ಮತ್ತು ಕಂಪೆನಿಗಳ ನಡುವಿನ ಕರಾರಿನಂತೆ ವಿಶೇಷ ಲೆಕ್ಕ ಪರಿಶೋಧನೆ ವ್ಯವಸ್ಥೆಗಳನ್ನು ರೂಪಿಸಲಾಗಿದೆ. ಟ್ರಾಯ್‌ ನಿಯಮಕ್ಕೆ ಅನುಗುಣವಾಗಿ ಲೆಕ್ಕಪತ್ರ ನಿರ್ವಹಣೆ ನಡೆಸಲಾಗುತ್ತಿದೆ. ಹಾಗಾಗಿ ಮಹಾಲೇಖಪಾಲರಿಗೆ ಲೆಕ್ಕಪತ್ರವನ್ನು ಸಲ್ಲಿಸುವಂತೆ ಬಲವಂತ ಮಾಡಬಾರದು ಎಂದು ಈ ಸಂಘಟನೆಗಳು ಕೋರ್ಟ್‌ಗೆ ಹೇಳಿದ್ದವು.

ಈ ಕಂಪೆನಿಗಳ ಲೆಕ್ಕ ಪರಿಶೋಧನೆ ಹಕ್ಕನ್ನು ಮಹಾಲೇಖಪಾಲರು ದೃಢವಾಗಿ ಪ್ರತಿಪಾದಿಸಿದ್ದರು. ಖಾಸಗಿ ಕಂಪೆನಿಗಳ ಆದಾಯ ಹಂಚಿಕೆ ವಿವರಗಳನ್ನು ನೀಡುವಂತೆ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.