ADVERTISEMENT

ಖಾಸಗಿ ಬ್ಯಾಂಕ್‌ಗಳಿಗೆ ಪಿಎಫ್‌ ಸಂಗ್ರಹ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ನವದೆಹಲಿ (ಪಿಟಿಐ): ಉದ್ಯೋಗಿಗಳ ಭವಿಷ್ಯ ನಿಧಿಗೆ ಮಾಲೀಕರ ದೇಣಿಗೆ ಸಂಗ್ರಹಿಸಲು ಖಾಸಗಿ ಬ್ಯಾಂಕ್‌ಗಳಿಗೆ ಅವಕಾಶ  ಮಾಡಿಕೊಡುವ ಪ್ರಸ್ತಾವ
ವನ್ನು ‘ಇಪಿಎಫ್‌ಒ’ದ ಸಲಹಾ ಸಮಿತಿ ತಿರಸ್ಕರಿಸಿದೆ.

ಐಸಿಐಸಿಐ, ಎಕ್ಸಿಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಮಾಲೀಕರಿಂದ ‘ಪಿಎಫ್‌’ ದೇಣಿಗೆ ಸಂಗ್ರಹಿಸಲು ಅವಕಾಶ ಮಾಡಿಕೊಡುವ ಪ್ರಸ್ತಾವವನ್ನು ಹಣಕಾಸು, ಲೆಕ್ಕಪತ್ರ ಮತ್ತು ಹೂಡಿಕೆ ಸಮಿತಿಯು ತಿರಸ್ಕರಿಸಿದೆ ಎಂದು ‘ಇಪಿಎಫ್‌ಒ’ ಟ್ರಸ್ಟಿಯಾಗಿರುವ ಭಾರತೀಯ ಮಜ್ದೂರ್‌ ಸಂಘದ ಮಹಾರಾಷ್ಟ್ರದ ಪ್ರಧಾನ ಕಾರ್ಯದರ್ಶಿ ಪಿ. ಜೆ. ಬನಸೂರೆ  ಅವರು ಬುಧವಾರ ತಿಳಿಸಿದ್ದಾರೆ.

ಈ ಸಮಿತಿಯ ಶಿಫಾರಸುಗಳನ್ನು , ಜುಲೈ  7 ರಂದು ನಡೆಯಲಿರುವ ಇಪಿಎಫ್‌ಒ ಧರ್ಮದರ್ಶಿಗಳ ಕೇಂದ್ರೀಯ ಮಂಡಳಿಯ (ಸಿಬಿಟಿ)  ಸಭೆಯಲ್ಲಿ ಮಂಡಿಸಲಾಗುತ್ತಿದೆ. ಸಾಮಾನ್ಯವಾಗಿ ಸಮಿತಿಯ ಶಿಫಾರಸನ್ನು  ‘ಸಿಬಿಟಿ’ ಅಂಗೀಕರಿಸುತ್ತದೆ. ಸದ್ಯಕ್ಕೆ, ಭಾರತೀಯ ಸ್ಟೇಟ್‌ ಬ್ಯಾಂಕ್‌ ‘ಇಪಿಎಫ್‌ಒ’ ಪರವಾಗಿ  ಮಾಲೀಕರಿಂದ ದೇಣಿಗೆ ಸಂಗ್ರಹಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಇತರ ಬ್ಯಾಂಕ್‌ಗಳಿಗೂ ಈ ಅವಕಾಶ ವಿಸ್ತರಿಸುವ ಪ್ರಯತ್ನ ಪ್ರಗತಿಯಲ್ಲಿ ಇದೆ.

₹ 1,000 ಕನಿಷ್ಠ ಮಾಸಿಕ ಪಿಂಚಣಿ

ಪಿಂಚಣಿದಾರರಿಗೆ ಮಾಸಿಕ ಕನಿಷ್ಠ ₹ 1,000 ಗಳಷ್ಟು ಪಿಂಚಣಿಯನ್ನು ಶಾಶ್ವತವಾಗಿ ನೀಡುವುದಕ್ಕೆ ಕಾರ್ಮಿಕ ಸಚಿವಾಲಯವು  ‘ಉದ್ಯೋಗಿಗಳ ಪಿಂಚಣಿ ಯೋಜನೆ 1995’ಗೆ ತಿದ್ದುಪಡಿ ತಂದಿದೆ. ಇದಕ್ಕೂ ಮೊದಲು 2014ರ ಸೆಪ್ಟೆಂಬರ್‌ 1ರಿಂದ ಈ ಮೊತ್ತದ ಪಿಂಚಣಿ ನೀಡಲು ನಿರ್ಧರಿಸಲಾಗಿತ್ತು. ಆದರೆ, ಈ ನಿರ್ಧಾರವು ತಾತ್ಕಾಲಿಕ ಸ್ವರೂಪದಲ್ಲಿತ್ತು. 2015ರ ಮಾರ್ಚ್‌ ಅಂತ್ಯದವರೆಗೆ ಮಾತ್ರ ಜಾರಿಯಲ್ಲಿತ್ತು.  ಆಡಳಿತಾತ್ಮಕ ಆದೇಶದ ಮೇರೆಗೆ ಈ ಸೌಲಭ್ಯ ಮುಂದುವರೆಸಲಾಗಿತ್ತು. ಕಳೆದ ವರ್ಷದ ಏರ್ಪಿಲ್‌ನಲ್ಲಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಶಾಶ್ವತವಾಗಿ ಇದನ್ನು ಮುಂದುವರೆಸಲು ಕೇಂದ್ರ ಸಚಿವ ಸಂಪುಟವು ಕಳೆದ ವರ್ಷದ ಏರ್ಪಿಲ್‌ನಲ್ಲಿ ಅನುಮೋದನೆ ನೀಡಿತ್ತು. ಈ ಉದ್ದೇಶಕ್ಕೆ ₹ 850 ಕೋಟಿಗಳ ಅನುದಾನವನ್ನೂ  ಬಿಡುಗಡೆ ಮಾಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.