ADVERTISEMENT

ಗಣಿ ಹಗರಣ: ಉದ್ಯಮಕ್ಕೆ ಮಾರಕ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಕರ್ನಾಟಕ ಮತ್ತು ಒಡಿಶಾದಲ್ಲಿ  ಇತ್ತೀಚೆಗೆ ಬೆಳಕಿಗೆ ಬಂದಿರುವ ಗಣಿ ಹಗರಣಗಳು ದೇಶದ ಉಕ್ಕು ಉದ್ಯಮದ ಭವಿಷ್ಯವನ್ನು ಮಸುಕಾಗಿಸಿವೆ ಎಂದು ವಿಶ್ವಬ್ಯಾಂಕ್ ವಿಶ್ಲೇಷಿಸಿದೆ.

ಗಣಿಗಾರಿಕೆ ಅದರಲ್ಲೂ ವಿಶೇಷವಾಗಿ ಕಬ್ಬಿಣ ಅದಿರು ಗಣಿಗಾರಿಕೆಗೆ ಸಂಬಂಧಿಸಿದಂತೆ ಈ ಎರಡೂ ರಾಜ್ಯಗಳಲ್ಲಿ ನಡೆದಿರುವ ಹಗರಣಗಳು ಉಕ್ಕು ಉದ್ಯಮದ ಭವಿಷ್ಯದ ಬೆಳವಣಿಗೆಗೆ ಅಡ್ಡಿಯಾಗಿವೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಬಂಡವಾಳ ಹೂಡಿಕೆಯಲ್ಲಿ ಇಳಿಕೆ,  ಉದ್ಯಮದಿಂದ ಬಂಡವಾಳ ವಾಪಸಾತಿ ಮತ್ತು ಷೇರುಪೇಟೆಯಲ್ಲಿ ವಹಿವಾಟು ಇಳಿಕೆಯು ಈ ಉದ್ಯಮದ ಸಮಸ್ಯೆಗಳನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದು ವಿಶ್ವಬ್ಯಾಂಕ್, ಭಾರತದ ಆರ್ಥಿಕತೆಗೆ ಸಂಬಂಧಿಸಿದ ವರದಿಯಲ್ಲಿ ತಿಳಿಸಿದೆ.

ಗಣಿಗಾರಿಕೆಗೆ ಅನುಮತಿ ದೊರೆಯದಿರುವುದರಿಂದ ಹೂಡಿಕೆದಾರರು ಬಂಡವಾಳ ತೊಡಗಿಸಲು ಹಿಂದೇಟು ಹಾಕುತ್ತಿದ್ದಾರೆ. ಭೂಮಿ ಸ್ವಾಧೀನ ವಿವಾದಗಳು ಹೂಡಿಕೆದಾರರನ್ನು ನಿರುತ್ಸಾಹಗೊಳಿಸಿವೆ.ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿದಂತೆ ಸುಧಾರಣಾ ಕ್ರಮಗಳನ್ನು ಕೈಗೊಂಡರೆ ಅದರಿಂದ ಭಾರತದ ಅರ್ಥವ್ಯವಸ್ಥೆಗೆ ಚೇತರಿಕೆ ದೊರೆಯಲಿದೆ ಎಂದೂ ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.