ADVERTISEMENT

ಗೋರಖ್ ಸಿಂಗ್ ವರದಿ ಅನುಷ್ಠಾನಕ್ಕೆ ಆಗ್ರಹ

ಗುಟ್ಕಾ ನಿಷೇಧ; ಅಡಿಕೆ ಬೆಳೆಗಾರರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 19:59 IST
Last Updated 5 ಜೂನ್ 2013, 19:59 IST
ಗೋರಖ್ ಸಿಂಗ್ ವರದಿ ಅನುಷ್ಠಾನಕ್ಕೆ ಆಗ್ರಹ
ಗೋರಖ್ ಸಿಂಗ್ ವರದಿ ಅನುಷ್ಠಾನಕ್ಕೆ ಆಗ್ರಹ   

ಶಿವಮೊಗ್ಗ: ರಾಜ್ಯ ಸರ್ಕಾರದ ಗುಟ್ಕಾ ನಿಷೇಧ ಆದೇಶದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಹಿತಕಾಯುವ ಗೋರಖ್ ಸಿಂಗ್ ವರದಿ ಶೀಘ್ರ ಅನುಷ್ಠಾನಕ್ಕೆ ಎಲ್ಲೆಡೆಯಿಂದ ಒತ್ತಾಯ ಕೇಳಿಬರಲಾರಂಭಿಸಿದೆ.

ಗುಟ್ಕಾ ನಿಷೇಧವನ್ನು ತರಾತುರಿಯಲ್ಲಿ ಕೈಗೊಂಡ ರಾಜ್ಯ ಸರ್ಕಾರ, ಗೋರಖ್ ಸಿಂಗ್ ವರದಿ ಶೀಘ್ರ ಅನುಷ್ಠಾನಕ್ಕೆ ಕೇಂದ್ರ ಸರ್ಕಾರನ್ನು ಏಕೆ ಮನವೊಲಿಸುತ್ತಿಲ್ಲ ಎಂದು ಅಡಿಕೆ ಬೆಳೆಗಾರರು ಪ್ರಶ್ನಿಸುತ್ತಿದ್ದಾರೆ.

ಕೊಳೆ, ಹಳದಿ ಎಲೆ, ಹೂಗೊಂಚಲು, ಕಾಂಡ ರಸ ಸೋರುವ ಕಾಯಿಲೆ... ಹೀಗೆ ರೋಗಗಳ ಸರಮಾಲೆಯನ್ನೇ ಅಡಿಕೆ ಬೆಳೆ ಹೊದ್ದುಕೊಂಡಿದೆ. ಅಡಿಕೆ ಉತ್ಪಾದನೆ ಇತ್ತೀಚಿನ ವರ್ಷಗಳಲ್ಲಿ ಕುಸಿತ ಕಂಡಿತ್ತು. ರೋಗಬಾಧೆಗೆ ಒಳಗಾದ ತೋಟಗಳನ್ನು ಬೆಳೆಗಾರರು ಸಾಲು-ಸಾಲಾಗಿ ಕಡಿದು ಹಾಕಿದ್ದರು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲೇ ಮುಖ್ಯವಾಗಿ ಮಲೆನಾಡಿನ ಬೆಳೆಗಾರರ ಸತತ ಮನವಿಗೆ ಮಣಿದ ಕೇಂದ್ರ ಸರ್ಕಾರ, ರಾಷ್ಟ್ರೀಯ ತೋಟಗಾರಿಕಾ ಆಯುಕ್ತ ಗೋರಖ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಿ ಈ ಸಂಬಂಧ ವರದಿ ನೀಡುವಂತೆ ಆದೇಶಿಸಿತು.

ADVERTISEMENT

2009ರ ನವೆಂಬರ್‌ನಲ್ಲಿ ರಚನೆಗೊಂಡ ಗೋರಖ್ ಸಿಂಗ್ ಸಮಿತಿಯ ಸದಸ್ಯರು ಅದೇ ತಿಂಗಳ 17,18 ಮತ್ತು 19ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಭಾಗಗಳ ತೋಟಗಳ ಅಧ್ಯಯನ ಮಾಡಿ, ಬೆಳೆಗಾರರೊಂದಿಗೆ ಚರ್ಚೆ ನಡೆಸಿದರು. ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರ ತೀವ್ರ ತುರ್ತು ಇರುವುದರಿಂದ ಗೋರಖ್ ಸಿಂಗ್, ಕೇಂದ್ರ ಸರ್ಕಾರಕ್ಕೆ ಅದೇ ವರ್ಷದ ಡಿಸೆಂಬರ್‌ನಲ್ಲಿ ವಿವರವಾದ ವರದಿ ನೀಡಿದ್ದರು.

ನಾಲ್ಕು ಹೆಕ್ಟೇರ್ (10 ಎಕರೆ)ವರೆಗಿನ ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು ಎನ್ನುವುದು ಗೋರಖ್ ಸಿಂಗ್ ವರದಿಯ ಪ್ರಮುಖ ಅಂಶಗಳಲ್ಲಿ ಒಂದು. ಹಾಗೆಯೇ, ಅಡಿಕೆ ಬೆಳೆಗಾರರಿಗೆ ಮರು ಸಾಲ ನೀಡಬೇಕು. ಸಂಪ್ರದಾಯವಾಗಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಸರ್ಕಾರ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಜಾರಿಗೊಳಿಸಿ, ಬೆಳೆಗಾರರ ಬೆಂಬಲಕ್ಕೆ ನಿಲ್ಲಬೇಕು ಎಂಬುದಾಗಿತ್ತು.

ಅಲ್ಲದೇ, ಹಳದಿ ಎಲೆ ರೋಗ ಪೀಡಿತ ತೋಟಗಳಲ್ಲಿ ಪರ‌್ಯಾಯ ಬೆಳೆ ಬೆಳೆಯಲು ಸಾಲ-ಸೌಲಭ್ಯ ನೀಡಬೇಕು. ಹಾಗೆಯೇ, ಅಡಿಕೆ ತೋಟಗಳಲ್ಲಿ ಅಂತರಬೆಳೆಯಾಗಿ ಕೋಕಾ, ಅನಾನಸ್, ಏಲಕ್ಕಿ, ಮಾವು ಬೆಳೆಯಲು ಅನುದಾನ ಒದಗಿಸಬೇಕು. ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಅಡಿಕೆ ತೋಟಗಳ ವಿಸ್ತರಣೆಗೆ ಸರ್ಕಾರ ಉತ್ತೇಜನ ನೀಡಬಾರದು ಮತ್ತಿತರ ಶಿಫಾರಸುಗಳು ಗೋರಖ್ ಸಿಂಗ್ ವರದಿಯಲ್ಲಿವೆ.

'ವರದಿ, ಕೇಂದ್ರ ಸರ್ಕಾರದ ಕೈ ಸೇರಿ ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಗೆದ್ದರೆ ಗೋರಖ್ ಸಿಂಗ್ ವರದಿ ಅನುಷ್ಠಾನ ಖಚಿತ ಎಂದು ಜನರಿಗೆ ಭರವಸೆ ನೀಡಿದ ಕಾಂಗ್ರೆಸ್ ಪಕ್ಷ ಚಿಕ್ಕಮಗಳೂರು-ಉಡುಪಿ ಲೋಕಸಭಾ ಉಪ ಚುನಾವಣೆಯ ಯಶಸ್ಸು ಗಳಿಸಿತು. ಆದರೆ ಅಂದಿನ ಭರವಸೆ ಇಂದಿಗೂ ಈಡೇರಿಲ್ಲ. ಹಲವು ಬಾರಿ ಅನುಷ್ಠಾನಕ್ಕೆ ಆಗ್ರಹಿಸಿ ಪಕ್ಷಾತೀತವಾಗಿ ಮನವಿ ಮಾಡಿದರೂ ಕೇಂದ್ರ ಸರ್ಕಾರ ಪರಿಗಣಿಸಿಲ್ಲ. ಈ ಮಧ್ಯೆ ಅದರದೇ ಸರ್ಕಾರ ಇರುವ ರಾಜ್ಯದಲ್ಲಿ ಏಕಾಏಕಿ ಗುಟ್ಕಾ ನಿಷೇಧಿಸಲಾಗಿದೆ.

ನಾವೆಲ್ಲ ಆತಂಕಕ್ಕೆ ಒಳಗಾಗಿದ್ದೇವೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವೇ ನೇತೃತ್ವ ವಹಿಸಿ, ವರದಿಯ ಶೀಘ್ರ ಜಾರಿಗೆ ಕೇಂದ್ರವನ್ನು ಒತ್ತಾಯಿಸಿ, ಬೆಳೆಗಾರರ ನೆರವಿಗೆ ಬರಬೇಕು' ಎಂದು ಆಗ್ರಹಿಸುತ್ತಾರೆ ತೀರ್ಥಹಳ್ಳಿಯ ಕುರುವಳ್ಳಿ ಪ್ರದೇಶದ ಅಡಿಕೆ ಬೆಳೆಗಾರ ಮಂಜುನಾಥ ಹೆಗ್ಡೆ.

ಕೇಂದ್ರ ಸರ್ಕಾರ, ಗೋರಖ್ ಸಿಂಗ್ ವರದಿಯನ್ನು ನೇರವಾಗಿ ಅನುಷ್ಠಾನಗೊಳಿಸದಿರಬಹುದು; ಆದರೆ, ಅಡಿಕೆ ಬೆಳೆಗಾರರ ಸಾಲ ಮರುಪಾವತಿಯ ಕಾಲಾವಧಿಯನ್ನು ಹೆಚ್ಚಿಸಿದೆ. ಅಡಿಕೆ ಅಮದು ದರ ದುಪ್ಟಟ್ಟುಗೊಳಿಸಿದೆ. ಹಾಗೆಯೇ, ಅಡಿಕೆ ಪುನಶ್ಚೇತನ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಹಿಂದಿನ ರಾಜ್ಯ ಸರ್ಕಾರ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗದಿದ್ದರಿಂದ ಬೆಳೆಗಾರರಿಗೆ ಅವುಗಳ ಪ್ರಯೋಜನಗಳು ಸಿಗಲಿಲ್ಲ. ಅಡಿಕೆ ಬೆಳೆಗಾರರಿಗೆ ಕೇಂದ್ರ ಸರ್ಕಾರ ಘೋಷಿಸಿದ ಈ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಮಾಹಿತಿಯನ್ನೇ ನೀಡಲಿಲ್ಲ ಎಂದು ದೂರುತ್ತಾರೆ ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ.

`ಗೋರಖ್ ಸಿಂಗ್ ವರದಿ ಅನುಷ್ಠಾನಕ್ಕೆ ಬೇಕಾದ ಪೂರಕವಾದ ಹಲವು ಮಾಹಿತಿಗಳನ್ನು ರಾಜ್ಯ ಸರ್ಕಾರ ಇದುವರೆಗೂ ಕೇಂದ್ರಕ್ಕೆ ಒದಗಿಸಿಲ್ಲ. ಜಿಲ್ಲೆಯಲ್ಲಿ 4 ಹೆಕ್ಟೇರ್‌ವರೆಗಿನ ಎಷ್ಟು ಜನ ಬೆಳೆಗಾರರು ಸಾಲ ಪಡೆದಿದ್ದಾರೆಂಬ ಕನಿಷ್ಠ ಮಾಹಿತಿಯನ್ನು ಇಂದಿಗೂ ಜಿಲ್ಲಾಡಳಿತ ಸಲ್ಲಿಸಿಲ್ಲ' ಎಂದು ಆಕ್ಷೇಪಿಸುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.