ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕೈಗಾರಿಕೆಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಬೆಂಗಳೂರು: ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಒತ್ತು ನೀಡಲಾಗುವುದು. ಮಾರ್ಚ್ ವೇಳೆಗೆ 50 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದಾಗಿ ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ ಸೋಮವಾರ ಇಲ್ಲಿ ಹೇಳಿದರು.

ರಾಜ್ಯದ ವಿವಿಧ ಭಾಗಗಳಲ್ಲಿ 5000ಕ್ಕೂ ಹೆಚ್ಚು ಸಣ್ಣ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಇದ್ದು, ಈ ನಿಟ್ಟಿನಲ್ಲಿ ಉದ್ಯಮಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಇದಕ್ಕೆ ಪೂರಕವಾಗಿ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇದೇ 29ರಂದು ಚಿಕ್ಕಮಗಳೂರಿನಲ್ಲಿ ಸಣ್ಣ ಉದ್ದಿಮೆದಾರರ ಜತೆ ಚರ್ಚೆ ನಡೆಸುವ ಸಭೆ ಆಯೋಜಿಸಿದ್ದು, ಆ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸಲು ಚಿಂತನೆ ನಡೆದಿದೆ ಎಂದರು.

ಯಾವ ಭಾಗದಲ್ಲಿ ಯಾವ ರೀತಿಯ ಕೈಗಾರಿಕೆ ಸ್ಥಾಪಿಸಬೇಕು. ಅದಕ್ಕೆ ಬಂಡವಾಳ ಎಷ್ಟು ಕೊಡಬೇಕು. ಹಣಕಾಸಿನ ನೆರವು ನೀಡಲು ಬ್ಯಾಂಕುಗಳನ್ನು ಗುರುತಿಸುವ ಕೆಲಸವೂ ಸಾಗಿದೆ ಎಂದು ಹೇಳಿದರು.

16ರಂದು ಸಭೆ: ಮುಂದಿನ ತಿಂಗಳ 16ರಂದು ಎಲ್ಲ ಶಾಸಕರು ಮತ್ತು ಸಂಸದರ ಸಭೆಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕರೆದಿದ್ದು, ಅಲ್ಲಿ ಸಣ್ಣ ಕೈಗಾರಿಕೆ ಸ್ಥಾಪಿಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗುವುದು. 

ರಸ್ತೆ, ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸುವುದಷ್ಟೇ ಶಾಸಕರ ಕೆಲಸವಲ್ಲ. ಕೈಗಾರಿಕೆ ಸ್ಥಾಪಿಸುವುದು ಕೂಡ ಅವರ ಜವಾಬ್ದಾರಿಯಾಗಿದ್ದು, ಇರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಲಾಗುವುದು ಎಂದರು.

ಸಣ್ಣ ಕೈಗಾರಿಕೆಗಳ ಸಲುವಾಗಿ ಇನ್ನೂ ರೂ 160 ಕೋಟಿಗಳ ಸಬ್ಸಿಡಿ ಬಾಕಿ ಇದೆ. ಹಂತಹಂತವಾಗಿ ಇದನ್ನು ಬಿಡುಗಡೆ ಮಾಡಲಾಗುವುದು. ತಾವು ಸಚಿವರಾದ ನಂತರ ್ಙ 50 ಕೋಟಿ  ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.