ADVERTISEMENT

ಚನ್ನಗಿರಿ ತುಮ್ಕೋಸ್: ಅಡಿಕೆ ಖರೀದಿ ಆರಂಭ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2011, 19:00 IST
Last Updated 20 ಏಪ್ರಿಲ್ 2011, 19:00 IST
ಚನ್ನಗಿರಿ ತುಮ್ಕೋಸ್: ಅಡಿಕೆ ಖರೀದಿ ಆರಂಭ
ಚನ್ನಗಿರಿ ತುಮ್ಕೋಸ್: ಅಡಿಕೆ ಖರೀದಿ ಆರಂಭ   

ಚನ್ನಗಿರಿ (ದಾವಣಗೆರೆ ಜಿಲ್ಲೆ): ದೇಶದಲ್ಲಿಯೇ ಅತಿ ಪ್ರಮುಖ ಅಡಿಕೆ ಖರೀದಿ ಕೇಂದ್ರವಾಗಿರುವ ಚನ್ನಗಿರಿ ಪಟ್ಟಣದ ತುಮ್ಕೋಸ್‌ನಲ್ಲಿ ಅಡಿಕೆ ಖರೀದಿ ಕಾರ್ಯ ಪುನರಾರಂಭವಾಗಿದೆ.
ಗುಟ್ಕಾ ಸ್ಯಾಶೆಯಲ್ಲಿನ ಪ್ಲಾಸ್ಟಿಕ್ ಬಳಕೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದ್ದರ ಪರಿಣಾಮವಾಗಿ ಅಡಿಕೆ ಖರೀದಿ ಕಾರ್ಯ ಕಳೆದೆರಡು ತಿಂಗಳಿಂದ ಸಂಪೂರ್ಣ ಸ್ಥಗಿತಗೊಂಡಿತ್ತು.

ಇದರಿಂದ ತಾಲ್ಲೂಕಿನ ಅಡಿಕೆ ಬೆಳೆಗಾರರು ಚಿಂತಾಕ್ರಾಂತರಾಗಿದ್ದರು. ರಾಜ್ಯದ ಎಲ್ಲೆಡೆ ಪ್ರತಿಭಟನೆಗಳು ನಡೆದಿದ್ದವು. ಸ್ಯಾಶೆಯಲ್ಲಿ ಪ್ಲಾಸ್ಟಿಕ್ ಬಳಕೆ  ಕೈಬಿಟ್ಟು ಗುಟ್ಕಾ ಕಂಪೆನಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿವೆ. ಈ ಕಾರಣದಿಂದ ಅಡಿಕೆ ಖರೀದಿ ಆರಂಭಗೊಂಡಿದೆ. ಇದರಿಂದ ಅಡಿಕೆ ಬೆಳೆಗಾರರ ಮೊಗದಲ್ಲಿ ಒಂದಿಷ್ಟು ಮಂದಹಾಸ ಮೂಡಿದೆ. ಅಡಿಕೆ ಮಾರಾಟ ಮಾಡಲು ಖರೀದಿ ಕೇಂದ್ರಗಳಿಗೆ ಎಡತಾಕಲು ಆರಂಭಿಸಿದ್ದಾರೆ.

ಪ್ರತಿವರ್ಷ ತುಮ್ಕೋಸ್ ಒಂದರಲ್ಲಿಯೇ 3 ಲಕ್ಷ ಕ್ವಿಂಟಲ್ ಅಡಿಕೆಯನ್ನು ಖರೀದಿಸಲಾಗುತ್ತದೆ. ` 500 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸುವ ಈ ಕೇಂದ್ರ ತಾಲ್ಲೂಕಿನ ಹಾಗೂ ನೆರೆಯ ಜಿಲ್ಲೆಗಳ ಅಡಿಕೆ ಬೆಳೆಗಾರರ ಸಂಜೀವಿನಿಯಾಗಿದೆ. ಇಲ್ಲಿನ ಅಡಿಕೆ ಉತ್ಕೃಷ್ಟ ದರ್ಜೆಯಾಗಿರುವುದರಿಂದ ನೇರವಾಗಿ ಗುಟ್ಕಾ ಕಂಪೆನಿಗಳು ಆನ್‌ಲೈನ್ ಮೂಲಕ ಖರೀದಿಸುತ್ತವೆ.

ಆದ್ದರಿಂದ ಇಲ್ಲಿನ ಅಡಿಕೆಗೆ ತುಂಬಾ ಬೇಡಿಕೆ ಇದೆ. ಬುಧವಾರ ತುಮ್ಕೋಸ್‌ನಲ್ಲಿ ರಾಶಿ ಅಡಿಕೆ ` 14,099ರಿಂದ `14,899 ಹಾಗೂ ಗೊರಬಲು ಅಡಿಕೆ ` 6,615ರಿಂದ ` 8,599ಗಳಿಗೆ ಟೆಂಡರ್ ಆಗಿದೆ. ಸುಮಾರು 19,400 ಮೂಟೆ ಅಡಿಕೆ ಮಾರುಕಟ್ಟೆಗೆ ಬಂದಿದೆ. ಬೆಳೆಗಾರರು ಈಗ ಉತ್ಸಾಹದಿಂದ ಅಡಿಕೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಹೆಚ್ಚುವ ಸಂಭವ ಇದೆ ಎಂದು ಮಾರುಕಟ್ಟೆ ವ್ಯವಸ್ಥಾಪಕ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.ಎರಡು ತಿಂಗಳು ಅಡಿಕೆ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಬೆಳೆಗಾರರಲ್ಲಿ ಚಿಂತೆ ಮನೆಮಾಡಿತ್ತು. ಆದರೆ, ಈಗ ಪುನಃ ಖರೀದಿ ಕಾರ್ಯ ಆರಂಭವಾಗಿರುವುದರಿಂದ ಬೆಳೆಗಾರರಲ್ಲಿ ಉತ್ಸಾಹ ಮೂಡಿದೆ ಎನ್ನುತ್ತಾರೆ ರೈತ ಸಂಘದ ಅಧ್ಯಕ್ಷ ಸಿ.ಆರ್. ತಿಪ್ಪೇಶಪ್ಪ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.