ADVERTISEMENT

ಚಿನ್ನದ ಕಾರಣ ಹೆಚ್ಚಿದ ಆಮದು ಹೊರೆ!

​ಪ್ರಜಾವಾಣಿ ವಾರ್ತೆ
Published 1 ಮೇ 2012, 19:30 IST
Last Updated 1 ಮೇ 2012, 19:30 IST
ಚಿನ್ನದ ಕಾರಣ ಹೆಚ್ಚಿದ ಆಮದು ಹೊರೆ!
ಚಿನ್ನದ ಕಾರಣ ಹೆಚ್ಚಿದ ಆಮದು ಹೊರೆ!   

ನವದೆಹಲಿ(ಪಿಟಿಐ): ಕಳೆದ (2011-12) ಹಣಕಾಸು ವರ್ಷದಲ್ಲಿ 30000 ಕೋಟಿ ಅಮೆರಿಕನ್ ಡಾಲರ್(ಈಗಿನ ವಿದೇಶಿ ವಿನಿಮಯ ಲೆಕ್ಕದಲ್ಲಿ ರೂ15.76 ಲಕ್ಷ ಕೋಟಿ) ಮೌಲ್ಯದ ಸರಕುಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡುವ ಗುರಿ ನಿಗದಿಪಡಿಸಲಾಗಿತ್ತು.

ಈ ಗುರಿಯನ್ನೂ ಮೀರಿ(30300 ಕೋಟಿ ಡಾಲರ್) ರಫ್ತು ವಹಿವಾಟು ದಾಖಲಾಗಿದೆ ಎಂದು ವಾಣಿಜ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಆಮದು ಪ್ರಮಾಣ 48800 ಕೋಟಿ ಡಾಲರ್(ಈಗಿನ ವಿದೇಶಿ ವಿನಿಮಯ ಲೆಕ್ಕದಲ್ಲಿ ರೂ25.64 ಲಕ್ಷ ಕೋಟಿ)ಗೆ ಹೆಚ್ಚಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ರಫ್ತಿಗಿಂತ ಅಮದು ಪ್ರಮಾಣವೇ ಹೆಚ್ಚಾಗಿದೆ. ಒಟ್ಟಾರೆ ಆಮದು-ರಫ್ತು ವ್ಯಾಪಾರದಲ್ಲಿ 18500 ಕೋಟಿ ಡಾಲರ್(ರೂ 9.72 ಲಕ್ಷ ಕೋಟಿ)ನಷ್ಟು ಕೊರತೆಯಾಗಿದೆ. ಇದು ಸಾರ್ವಕಾಲಿಕ ದಾಖಲೆ ಕೊರತೆ ಮಟ್ಟವಾಗಿದ್ದು, ಪರಿಸ್ಥಿತಿ   ತೀರಾ  ವಿಷಮಿಸಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಕಳವಳ ವ್ಯಕ್ತಪಡಿಸಿದ್ದಾರೆ.

ವಾರ್ಷಿಕ ರಫ್ತು ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 21ರಷ್ಟು ಹೆಚ್ಚಳ ಕಂಡಿದೆ. ಕನಿಷ್ಠ ಶೇ 28ರಷ್ಟು ಪ್ರಗತಿಯಾಗಿದ್ದರೆ ವಹಿವಾಟು ಕೊರತೆ ಇನ್ನಷ್ಟು ತಗ್ಗುತ್ತಿತ್ತು. ಅಮೆರಿಕ ಮತ್ತು ಯೂರೋಪ್‌ನಲ್ಲಿನ ಬಿಕ್ಕಟ್ಟಿನಿಂದಾಗಿ ಮಾರ್ಚ್ ತಿಂಗಳೊಂದರಲ್ಲಿಯೇ ರಫ್ತು ಶೇ 5.71ರಷ್ಟು ಕುಸಿತ ಕಂಡಿದೆ.

ವಿತ್ತೀಯ ಕೊರತೆ ಅಂತರ ಹೆಚ್ಚದಂತೆ ನೋಡಿಕೊಳ್ಳಬೇಕೆಂದು ರಿಸರ್ವ್ ಬ್ಯಾಂಕ್ ವಾರ್ಷಿಕ ಸಾಲ ನೀತಿಯಲ್ಲಿ ಸೂಚನೆ ನೀಡಿದೆ. ಆದರೆ, ಈಗಿನ ಅಂಕಿ ಅಂಶ ಗಮನಿಸಿದರೆ, ಇದು ಇನ್ನಷ್ಟು ಸವಾಲುಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದರು.

ಆಮದು ಸರಕುಗಳಲ್ಲಿ ಕಚ್ಚಾ ತೈಲ ಮತ್ತು ಚಿನ್ನದ ಪಾಲೇ ಶೇ 44ರಷ್ಟಿದೆ. ಚಿನ್ನದ ಆಮದು 6000 ಕೋಟಿ ಡಾಲರ್ ಏರಿದರೆ, ಕಚ್ಚಾತೈಲ ಆಮದು  15500 ಕೋಟಿ ಡಾಲರ್‌ನಷ್ಟಾಗಿದೆ(ಶೇ 46ರ ಹೆಚ್ಚಳ). ರಸಗೊಬ್ಬರ, ಕಲ್ಲಿದ್ದಲು ಮತ್ತು ಖಾದ್ಯ ತೈಲದ ಆಮದು ಕ್ರಮವಾಗಿ ಶೇ 80, ಶೇ 59 ಮತ್ತು ಶೇ 47ರಷ್ಟು ಏರಿಕೆ ಕಂಡಿವೆ.

ಎಂಜಿನಿಯರಿಂಗ್, ಪೆಟ್ರೋಲಿಯಂ ಉತ್ಪನ್ನ,  ಚಿನ್ನಾಭರಣ,  ರಫ್ತು ವಹಿವಾಟು ಆರೋಗ್ಯಕರ ಏರಿಕೆ ಕಂಡಿವೆ.

ಎಫ್‌ಐಇಒ ಆತಂಕ: ಸಾರ್ವಕಾಲಿಕ ವ್ಯಾಪಾರ ಕೊರತೆ ಉಂಟಾಗಿರುವುದು ಆತಂಕಕಾರಿ ಬೆಳವಣಿಗೆ. ಪೆಟ್ರೋಲಿಯಂ ಉತ್ಪನ್ನ, ಕಲ್ಲಿದ್ದಲು, ಚಿನ್ನ-ಬೆಳ್ಳಿ ಆಮದು ಹೊರೆ ಹೆಚ್ಚುತ್ತಿರುವುದರಿಂದ ವ್ಯಾಪಾರ ಅಸಮತೋಲನ ಸೃಷ್ಟಿಯಾಗಿದೆ. 2012-13ರಲ್ಲಿ ಕಲ್ಲಿದ್ದಲು, ರಸಗೊಬ್ಬರ ಮತ್ತು ಖಾದ್ಯ ತೈಲ ಆಮದು ಹೊರೆ ಹೆಚ್ಚುವ ಸಾಧ್ಯತೆ ಇದೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (ಎಫ್‌ಐಇಒ) ಅಧ್ಯಕ್ಷ ಎಂ. ರಫೀಕ್ ಅಹಮದ್ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.