ADVERTISEMENT

ಚಿನ್ನದ ಬಾಂಡ್‌: ಸೋಮವಾರ 1ನೇ ಕಂತು

ಪಿಟಿಐ
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST
ಚಿನ್ನದ ಬಾಂಡ್‌: ಸೋಮವಾರ 1ನೇ ಕಂತು
ಚಿನ್ನದ ಬಾಂಡ್‌: ಸೋಮವಾರ 1ನೇ ಕಂತು   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ (2018–19) ಚಿನ್ನದ ಬಾಂಡ್‌ ಯೋಜನೆಯ ಮೊದಲ ಕಂತು ಸೋಮವಾರದಿಂದ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಏಪ್ರಿಲ್‌ 16 ರಿಂದ ಏಪ್ರಿಲ್‌ 20ರವರೆಗೆ ಬಾಂಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೇ 4 ರಂದು ಬಾಂಡ್‌ ವಿತರಣೆ ನಡೆಯಲಿದೆ.

ಭಾರತೀಯ ಚಿನ್ನ ಮತ್ತು ಆಭರಣ ಒಕ್ಕೂಟವು (ಸೋಮವಾರದಿಂದ ಶುಕ್ರವಾರ) 999 ಶುದ್ಧತೆಯ ಚಿನ್ನಕ್ಕೆ ಒಂದು ವಾರಕ್ಕೆ ನಿಗದಿಪಡಿಸುವ ಬೆಲೆಯನ್ನು ಆಧರಿಸಿ ಬಾಂಡ್‌ ಬೆಲೆ ನಿಗದಿಪಡಿಸಲಾಗುವುದು ಎಂದು ಹೇಳಿದೆ.

ADVERTISEMENT

ಬ್ಯಾಂಕ್‌ಗಳು, ಅಂಚೆ ಕಚೇರಿ, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಸ್‌ಎಚ್‌ಸಿಐಎಲ್) ಹಾಗೂ ರಾಷ್ಟ್ರೀಯ  ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಚಿನ್ನದ ಬಾಂಡ್‌ ವಿತರಣೆಯಾಗಲಿದೆ.

ಭೌತಿಕ ರೂಪದಲ್ಲಿ ನಿಷ್ಪ್ರಯೋಜಕವಾಗಿರುವ ಚಿನ್ನವನ್ನು ಬಳಕೆಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರಲ್ಲಿ ಚಿನ್ನದ ಬಾಂಡ್‌ ಯೋಜನೆ ಜಾರಿಗೆ ತಂದಿದೆ.

ನಿರೀಕ್ಷಿಸಿದಷ್ಟು ಸಫಲವಾಗಿಲ್ಲ: ಕೇಂದ್ರ ಸರ್ಕಾರ ನಿರೀಕ್ಷೆ ಮಾಡಿದ ರೀತಿಯಲ್ಲಿ ಚಿನ್ನದ ಬಾಂಡ್‌ ಯೋಜನೆ ಸಫಲವಾಗಿಲ್ಲ. ಯೋಜನೆಯಿಂದ 2015–16ರಲ್ಲಿ ₹15 ಸಾವಿರ ಕೋಟಿ ಮತ್ತು 2016–17ರಲ್ಲಿ ₹10 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿತ್ತು. ಆದರೆ ಇದುವರೆಗೆ ಒಟ್ಟಾರೆ ₹4,769 ಕೋಟಿಯಷ್ಟು ಮಾತ್ರವೇ ಸಂಗ್ರಹವಾಗಿದೆ.

ಯೋಜನೆ ವಿವರ
* ಹೂಡಿಕೆ ಮಿತಿ ಕನಿಷ್ಠ 1 ಗ್ರಾಂ, ಗರಿಷ್ಠ 4 ಕೆ.ಜಿ.. ಟ್ರಸ್ಟ್‌ಗಳಿಗೆ 20ಕೆ.ಜಿವರೆಗೆ
* ಬಾಂಡ್‌ ಅವಧಿ 8 ವರ್ಷ
* ಬಡ್ಡಿದರ ಶೇ 2.50
* ಬಾಂಡ್‌ ಮೌಲ್ಯ ಪಾವತಿ ₹20 ಸಾವಿರದವರೆಗೆ ನಗದು
* ₹20 ಸಾವಿರಕ್ಕಿಂತ ಹೆಚ್ಚಿದ್ದರೆ ಡಿ.ಡಿ., ಚೆಕ್‌, ಆನ್‌ಲೈನ್‌ ಪಾವತಿಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.