ನವದೆಹಲಿ (ಪಿಟಿಐ): ಚಿನ್ನದ ಒಟ್ಟು ಮೌಲ್ಯದ ಶೇ 60ಕ್ಕಿಂತ ಹೆಚ್ಚಿನ ಹಣವನ್ನು ಸಾಲವಾಗಿ ನೀಡಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬಜೆಟ್‌ನಲ್ಲಿ ಚಿನ್ನದ ಆಮದು ದರ ಮತ್ತು ಬ್ರಾಂಡೆಡ್ ರಹಿತ ಆಭರಣಗಳ ಅಬಕಾರಿ ತೆರಿಗೆ ಹೆಚ್ಚಿಸಿರುವ ಬೆನ್ನಲ್ಲೆ, `ಆರ್‌ಬಿಐ~ ಈ ಕ್ರಮಕ್ಕೆ ಮುಂದಾಗಿದೆ. ಎಲ್ಲಾ ಬ್ಯಾಂಕೇತರ ಹಣಕಾಸು ಸಂಸ್ಥೆ ಗಳು ಶೇ 60ರಷ್ಟು ಚಿನ್ನದ `ಸಾಲ-ಮೌಲ್ಯ ಅನುಪಾತ~ (ಎಲ್‌ಟಿವಿ) ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಚಿನ್ನಾಭರಣಗಳಿಗೆ ನೀಡುವ ಸಾಲವು, ಆಭರಣಗಳ ಒಟ್ಟು ಮೌಲ್ಯದ ಶೇ 60ನ್ನು ಮೀರಬಾರದು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಹಲವು `ಎನ್‌ಬಿಎಫ್‌ಸಿ~ಗಳು ಚಿನ್ನದ ಮೇಲೆ ಗರಿಷ್ಠ ಸಾಲ ನೀಡುತ್ತಿವೆ ಹಾಗೂ ಹೆಚ್ಚಿನ ಬಡ್ಡಿ ದರ, ದಂಡ ವಸೂಲಿ ಮಾಡುತ್ತಿವೆ. ಇದನ್ನು ನಿಯಂತ್ರಿಸಲು `ಆರ್‌ಬಿಐ~ ಈ ಕ್ರಮ ಕೈಗೊಂಡಿದೆ.
ಚಿನ್ನದ ಮೇಲೆ ಸಾಲ ನೀಡುವ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಹಾಗೂ ಇಂತಹ ಸಂಸ್ಥೆಗಳಲ್ಲಿ ಭೌತಿಕ ರೂಪದಲ್ಲಿರುವ ಚಿನ್ನದ ಸಂಪತ್ತು ಹೆಚ್ಚಳವಾಗುತ್ತಿದೆ. ಸಂಸ್ಥೆಗಳು ತಮ್ಮ ವಹಿವಾಟು ವಿಸ್ತರಿಸಲು ಸಾರ್ವಜನಿಕರಿಂದ ಮತ್ತು ಬ್ಯಾಂಕುಗಳಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳ ನೆರವು ಪಡೆದುಕೊಳ್ಳುತ್ತಿವೆ. ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿರುವ ಈ ವಹಿವಾಟು ನಿಯಂತ್ರಿಸಲು ಇಂತಹ ಇಂತಹ ಬಿಗಿ ನೀತಿಯ ಅಗತ್ಯ ಇದೆ ಎಂದು `ಆರ್‌ಬಿಐ~ ಅಭಿಪ್ರಾಯಪಟ್ಟಿದೆ.
ಪ್ರತಿಯೊಂದು `ಎನ್‌ಬಿಎಫ್‌ಸಿ~ಗಳೂ ಚಿನ್ನದ ಮೇಲೆ ನೀಡುವ ಸಾಲ, ಒಟ್ಟು ಸಂಪತ್ತು ಸಂಗ್ರಹ, ನಿರ್ವಹಣೆ ಕುರಿತು ಆಯವ್ಯಯ ಪತ್ರ ಸಿದ್ಧಪಡಿಸಬೇಕು. ಒಟ್ಟು ಸಂಪತ್ತಿನಲ್ಲಿ ಎಷ್ಟು ಭಾಗವನ್ನು ಚಿನ್ನದ ಸಾಲ ರೂಪದಲ್ಲಿ ನೀಡಲಾಗಿದೆ, ಎಷ್ಟು ಹಣವನ್ನು ಸಾಲಪತ್ರಗಳು ಮತ್ತು ಸಾರ್ವಜನಿಕ ಕೊಡುಗೆಳ ಮೂಲಕ ಸಂಗ್ರಹಿಸಲಾಗಿದೆ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ಹೇಳಿದೆ.
ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ `ಎನ್‌ಬಿಎಫ್‌ಸಿ~ಗಳು ವಾರಸುದಾರರಿಗೆ ಚಿನ್ನವನ್ನು ಮರಳಿಸುವಾಗ ಅದರ ಗುಣಮಟ್ಟ ಪರೀಕ್ಷಿಸಿ, ಖಾತರಿಗೊಳಿಸುವ ವ್ಯವಸ್ಥೆಯನ್ನೂ ಜಾರಿಗೊಳಿಸಲು `ಆರ್‌ಬಿಐ~ ಚಿಂತಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.