ADVERTISEMENT

ಚಿನ್ನಾಭರಣ ವರ್ತಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ):  ಬಜೆಟ್‌ನಲ್ಲಿ ಚಿನ್ನದ ಆಮದು ತೆರಿಗೆ ಹೆಚ್ಚಿಸಿರುವುದು ಮತ್ತು ಬ್ರಾಂಡೆಡ್ ರಹಿತ ಚಿನ್ನಾಭರಣಗಳ ಮೇಲೆ ಅಬಕಾರಿ ತೆರಿಗೆ  ಹೇರಿರುವ ಕ್ರಮವನ್ನು ವಿರೋಧಿಸಿ ದೇಶದಾದ್ಯಂತ ಚಿನ್ನಾಭರಣ ವರ್ತಕರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ 10ನೇ ದಿನಕ್ಕೆ ಕಾಲಿಟ್ಟಿದೆ.

ಪ್ರತಿಭಟನೆಯಿಂದ ಚಿನ್ನಾಭರಣ ವರ್ತಕರಿಗೆ ಕಳೆದ 10 ದಿನಗಳಲ್ಲಿ ಸುಮಾರು ರೂ11 ಸಾವಿರ ಕೋಟಿಗಳಷ್ಟು ನಷ್ಟವಾಗಿದೆ.

ತೆರಿಗೆ ಹೆಚ್ಚಿಸಿರುವುದರಿಂದ ಚಿನ್ನದ ಅಕ್ರಮ ವಹಿವಾಟು ಮತ್ತು ಕಳ್ಳಸಾಗಾಣಿಕೆ ಹೆಚ್ಚಲಿದೆ. ಇದರ ಜತೆಗೆ ಪ್ರತಿ ಗ್ರಾಂ ಚಿನ್ನಕ್ಕೆ  ರೂ150 ಹೆಚ್ಚಲಿದ್ದು, ಹೆಚ್ಚುವರಿ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಬೇಕಾಗುತ್ತದೆ. 

ಸರ್ಕಾರ ವರ್ತಕರ ಮನವಿಗೆ ಸ್ಪಂದಿಸದಿದ್ದರೆ ಮೂರು ದಿನಗಳ ನಂತರ ದೆಹಲಿಯಲ್ಲಿ, ಬೃಹತ್ ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತ ಚಿನ್ನಾಭರಣ ವರ್ತಕರ ಒಕ್ಕೂಟ ಹೇಳಿದೆ.

ರಾಜ್ಯದಲ್ಲೂ ವಿರೋಧ
ಬೆಂಗಳೂರು: ಚಿನ್ನದ ಮೇಲಿನ ತೆರಿಗೆ ಹೆಚ್ಚಳ ವಿರೋಧಿಸಿ ಕರ್ನಾಟಕ ಜ್ಯುವೆಲರ್ಸ್ ಅಸೋಸಿಯೇಷನ್ ಮಂಗವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.

`ಗ್ರಾಹಕರ ಮತ್ತು ವರ್ತಕರ ಹಿತಾಸಕ್ತಿ ರಕ್ಷಿಸಲು ಕೇಂದ್ರ ಸರ್ಕಾರ ತೆರಿಗೆ ಹೆಚ್ಚಳವನ್ನು ಹಿಂದಕ್ಕೆ ಪಡೆಯಬೇಕು~ ಎಂದು  ಜ್ಯುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪಿ.ಎ ಶರವಣ ಆಗ್ರಹಿಸಿದ್ದಾರೆ.

ಚಿನ್ನ, ಬೆಳ್ಳಿ ಬೆಲೆ ಏರಿಕೆ
ಮುಂಬೈ (ಪಿಟಿಐ):ಮದುವೆ ಸೀಸನ್ ಆರಂಭವಾಗಿರುವುದರಿಂದ ಸೋಮವಾರ ಸ್ಟಾಂಡರ್ಡ್ ಚಿನ್ನದ ಬೆಲೆಯು 10 ಗ್ರಾಂಗಳಿಗೆ ರೂ415 ಏರಿಕೆಯಾಗಿದ್ದು, ರೂ28,275 ರಷ್ಟಾಗಿದೆ. ಬೆಳ್ಳಿ ಧಾರಣೆಯೂ ಕೆ.ಜಿಗೆ  ರೂ585 ಹೆಚ್ಚಳವಾಗಿದ್ದು, ರೂ56,915ರಷ್ಟಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.