ADVERTISEMENT

ಚಿನ್ನ ಆಮದು ನಿಯಂತ್ರಣಕ್ಕೆ ಇನ್ನಷ್ಟು ಕ್ರಮ

​ಪ್ರಜಾವಾಣಿ ವಾರ್ತೆ
Published 30 ಜನವರಿ 2013, 19:59 IST
Last Updated 30 ಜನವರಿ 2013, 19:59 IST
ಚಿನ್ನ ಆಮದು ನಿಯಂತ್ರಣಕ್ಕೆ ಇನ್ನಷ್ಟು ಕ್ರಮ
ಚಿನ್ನ ಆಮದು ನಿಯಂತ್ರಣಕ್ಕೆ ಇನ್ನಷ್ಟು ಕ್ರಮ   

ಲಂಡನ್ (ಪಿಟಿಐ): `ಚಿನ್ನದ ಆಮದು ತಗ್ಗಿಸಲು ಇನ್ನಷ್ಟು ಪರ್ಯಾಯ ಕ್ರಮಗಳ ಕುರಿತು ಸರ್ಕಾರ ಚಿಂತಿಸುತ್ತಿದೆ' ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ದೇಶದ ವಿದೇಶಿ ವಿನಿಮಯದ ದೊಡ್ಡ ಪಾಲು ಚಿನ್ನದ ಆಮದಿಗಾಗಿ ವ್ಯಯವಾಗುತ್ತಿದೆ. ಇದರಿಂದ ಚಾಲ್ತಿ ಖಾತೆ ಕೊರತೆ (ಸಿಎಡಿ) ದಾಖಲೆ ಪ್ರಮಾಣದಲ್ಲಿ ಹೆಚ್ಚಿದ್ದು, ಆರ್ಥಿಕ ಪ್ರಗತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅವರು ಬುಧವಾರ ಇಲ್ಲಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಚಿನ್ನದ ಆಮದು ತಗ್ಗಿಸಲು ಕೇಂದ್ರ ಸರ್ಕಾರ ಕಳೆದ ವಾರ ಆಮದು ಸುಂಕವನ್ನು ಶೇ 4ರಿಂದ ಶೇ 6ಕ್ಕೆ ಹೆಚ್ಚಿಸಿತ್ತು. ಜತೆಗೆ ಮಾರುಕಟ್ಟೆಯಲ್ಲಿ ಭೌತಿಕ ಹೆಚ್ಚಿನ ಲಭ್ಯತೆ ಹೆಚ್ಚಿಸಲು ಗೋಲ್ಡ್  `ಇಟಿಎಫ್' ಯೋಜನೆಯನ್ನು ಮ್ಯೂಚುವಲ್ ಫಂಡ್ ಸಂಸ್ಥೆಗಳು ನಿರ್ವಹಿಸುವ `ಗೋಲ್ಡ್ ಡಿಪಾ    ಸಿಟ್' ಯೋಜನೆ  ಜತೆ ಜೋಡಿಸಿತ್ತು. ಈ ಕ್ರಮದಿಂದ ಮಾರುಕಟ್ಟೆಯಲ್ಲಿ ಸುಮಾರು 1520 ಟನ್‌ಗಳಷ್ಟು ಭೌತಿಕ ಚಿನ್ನ ಲಭ್ಯವಾಗಲಿದೆ ಎಂದು ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಚಾಲ್ತಿ ಖಾತೆ ಕೊರತೆಯು ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ 4.6ರಷ್ಟು ಪ್ರಮಾಣಕ್ಕೆ ಏರಿದ್ದು, 3870 ಕೋಟಿ  ಡಾಲರ್ (ಸುಮಾರು ರೂ.2.10 ಲಕ್ಷ ಕೋಟಿ)ಗಳಷ್ಟಾಗಿದೆ. ಈ ಅವಧಿಯಲ್ಲಿ 2025 ಕೋಟಿ ಡಾಲರ್ (ರೂ.1,10 ಲಕ್ಷ ಕೋಟಿ) ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಅಂತರ ಒಟ್ಟು  ಜಿಡಿಪಿಯ  ಶೇ 5.3 ಮೀರಬಾರದು. ಮುಂದಿನ ಹಣಕಾಸು ವರ್ಷದಲ್ಲಿ ಇದು ಶೇ 4.8ರ ಒಳಗಿರಬೇಕು ಎಂದು ನಿರ್ಧರಿಸಿ  ಕೆಂಪು ಗೆರೆ ಎಳೆದಿದ್ದೇನೆ. ಹಾಗಾಗಿ ಈ ಬಾರಿ ಹೆಚ್ಚು ಜವಾಬ್ದಾರಿಯುತ ಬಜೆಟ್ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕೆಂಪು ಗೆರೆಯನ್ನು ನಾನು ದಾಟುವುದಿಲ್ಲ.  ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಮುಂದಿನ ಹಣಕಾಸು ವರ್ಷದಲ್ಲಿ ಶೇ 6ರಿಂದ 7ರಷ್ಟು ಜಿಡಿಪಿ ಪ್ರಗತಿ ನಿರೀಕ್ಷಿಸಬಹುದು ಎಂದು ಅವರು   ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್ ಪರವಾನಗಿ: ಶೀಘ್ರ ಮಾರ್ಗಸೂಚಿ
ಹೊಸ ಬ್ಯಾಂಕ್ ಸ್ಥಾಪನೆ ಪರವಾನಗಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 15 ದಿನದೊಳಗೆ ಅಂತಿಮ ಮಾರ್ಗಸೂಚಿ ಪ್ರಕಟಿಸಲಿದೆ  ಎಂದು  ಚಿದಂಬರಂ ಹೇಳಿದ್ದಾರೆ.

ಖಾಸಗಿ ಕ್ಷೇತ್ರದ 5 ಸಂಸ್ಥೆಗಳಿಗೆ ಹೊಸ ಬ್ಯಾಂಕ್ ಸ್ಥಾಪನೆಗೆ ಪರವಾನಗಿ ನೀಡಲಾಗುವುದು.  ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕ್ ಸ್ಥಾಪನೆಗೆ ಅನುಮತಿ ನಿರಾಕರಿಸುವುದಿಲ್ಲ  ಎಂದೂ ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.  

ಕಾರ್ಪೊರೇಟ್ ಕಂಪೆನಿಗಳಾದ ರಿಲಯನ್ಸ್, ರೆಲಿಗೇರ್, ಶ್ರೀರಾಮ್ ಸಮೂಹ, ಎಲ್‌ಅಂಡ್‌ಟಿ, ಆದಿತ್ಯಾ ಬಿರ್ಲಾ ಸಮೂಹ ಹೊಸ ಬ್ಯಾಂಕ್ ಸ್ಥಾಪನೆಗೆ ಆಸಕ್ತಿ ವ್ಯಕ್ತಪಡಿಸಿದ್ದು, ಅಂತಿಮ ಮಾರ್ಗಸೂಚಿಗಾಗಿ ಕಾಯುತ್ತಿವೆ.

ಇಂದು ಬಜೆಟ್ ಪೂರ್ವ ಸಭೆ
`ಜಿಡಿಪಿ' ಪ್ರಗತಿ ಮತ್ತು ಹೂಡಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚಿದಂಬರಂ ಗುರುವಾರ ಹಣಕಾಸು ತಜ್ಞರ ಜತೆ ಚರ್ಚೆ ನಡೆಸಲಿದ್ದಾರೆ.

ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ (ಎಫ್‌ಎಸ್‌ಡಿಸಿ) ಉನ್ನತ ಅಧಿಕಾರಿಗಳ ಜತೆ ಚಿದಂಬರಂ ಮಾತುಕತೆ ನಡೆಸಲಿದ್ದು, `ಆರ್‌ಬಿಐ, `ಐಆರ್‌ಡಿಎ' ಮತ್ತು `ಸೆಬಿ' ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.