ಮುಂಬೈ (ಪಿಟಿಐ): ಇಲ್ಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಸೋಮವಾರದ ವಹಿವಾಟಿನಲ್ಲಿ ತಲಾ 10 ಗ್ರಾಂಗಳಿಗೆ ರೂ 21 ಸಾವಿರದ ಗಡಿ ದಾಟಿ ಹೊಸ ದಾಖಲೆ ಬರೆಯಿತು.
ಜಾಗತಿಕ ವಹಿವಾಟಿನ ಸ್ವರೂಪದಿಂದ ಉತ್ತೇಜಿತರಾಗಿರುವ ಸಂಗ್ರಹಕಾರರು ಮತ್ತು ಹೂಡಿಕೆದಾರರು ಗಮನಾರ್ಹ ಪ್ರಮಾಣದಲ್ಲಿ ಖರೀದಿಗೆ ಮುಂದಾಗಿದ್ದರಿಂದ ಚಿನ್ನದ ಬೆಲೆ ಏರುಗತಿಯಲ್ಲಿ ಇದೆ.ಇನ್ನೊಂದೆಡೆ, ಊಹಾತ್ಮಕ ಬೇಡಿಕೆ ಮತ್ತು ಕೈಗಾರಿಕಾ ರಂಗದ ಬೆಂಬಲದ ಫಲವಾಗಿ ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ರೂ 54 ಸಾವಿರ ದಾಟಿ ಹೊಸ ಮೈಲಿಗಲ್ಲು ತಲುಪಿತು.ಶನಿವಾರದ ಬೆಲೆಗೆ ಹೋಲಿಸಿದರೆ ಸ್ಟ್ಯಾಂಡರ್ಡ್ ಚಿನ್ನದ (99.5ರಷ್ಟು ಶುದ್ಧತೆ) ಬೆಲೆಯು, ತಲಾ 10 ಗ್ರಾಂಗಳಿಗೆ ರೂ 135ರಂತೆ ಹೆಚ್ಚಳಗೊಂಡು ರೂ 21,125ರಷ್ಟಾಯಿತು.
ಶುದ್ಧ ಚಿನ್ನದ ಬೆಲೆಯು (99.9ರಷ್ಟು ಶುದ್ಧತೆ) ಪ್ರತಿ 10 ಗ್ರಾಂಗಳಿಗೆ ರೂ 125ರಂತೆ ಹೆಚ್ಚಳಗೊಂಡು ರೂ 21,225ರಷ್ಟಾಯಿತು.ಬೆಳ್ಳಿ ಬೆಲೆಯು ಪ್ರತಿ ಕೆ.ಜಿಗೆ ರೂ 1,370ರಂತೆ ಹೆಚ್ಚಾಗಿ ರೂ 54,970ಕ್ಕೆ ಏರಿಕೆ ಕಂಡಿತು.
ಲಂಡನ್ ವರದಿ (ಬ್ಲೂಂಬರ್ಗ್): ಮಧ್ಯಪ್ರಾಚ್ಯ ಮತ್ತು ಉತ್ತರ ಅಮೆರಿಕದಲ್ಲಿನ ಅಶಾಂತಿಯ ಪರಿಣಾಮವಾಗಿ ಸಾಗರೋತ್ತರ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಾಖಲೆ ಮಟ್ಟಕ್ಕೆ ಏರಿಕೆ ಕಾಣುತ್ತಿವೆ. ಲಂಡನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 12.40 ಡಾಲರ್‌ಗಳಷ್ಟು ಹೆಚ್ಚಾಗಿ 1,443.30 ಡಾಲರ್‌ಗೆ ತಲುಪಿದೆ. ಬೆಳ್ಳಿಯು 31 ವರ್ಷಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.