ADVERTISEMENT

ಚಿನ್ನ ವರ್ಷದಲ್ಲಿ ಶೇ12.65 ದುಬಾರಿ

2011ರಲ್ಲಿರೂ 6605: 2012ರಲ್ಲಿ ರೂ3440 ಏರಿಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST
ಚಿನ್ನ ವರ್ಷದಲ್ಲಿ ಶೇ12.65 ದುಬಾರಿ
ಚಿನ್ನ ವರ್ಷದಲ್ಲಿ ಶೇ12.65 ದುಬಾರಿ   

ಮುಂಬೈ(ಪಿಟಿಐ): ಚಿನ್ನ ಕೈಗೆಟುವ ಮಟ್ಟದಲ್ಲಿಯಂತೂ ಇಲ್ಲವೇ ಇಲ್ಲ ಎನ್ನವುದು ಮಧ್ಯಮ ವರ್ಗದವರ ಬೇಸರಕ್ಕೆ ಕಾರಣ. ಚಿನ್ನದ ಬೆಲೆ ಇನ್ನಷ್ಟು ಹೆಚ್ಚಿದರೆ ನಮಗೆ ಒಳ್ಳೆಯ ಲಾಭ ಎಂಬುದು ಚಿನ್ನದಲ್ಲಿ ಹೂಡಿಕೆ ಮಾಡಿದವರ ಆಶಯ. ಚಿನ್ನ ಎಷ್ಟಾದರೂ ಏರಲಿ ನಮ್ಮ ಪಾಲಿನ ಲಾಭ ಇದ್ದೇ ಇರುತ್ತದೆ ಎನ್ನುವುದ ಆಭರಣ ವರ್ತಕರ ಸಮಚಿತ್ತದ ನುಡಿ.

ಚಿನ್ನದ ಧಾರಣೆ ಕಳೆದ ದಶಕದಲ್ಲಿಯೂ ಉತ್ತರಮುಖಿಯಾಗಿಯೇ ಇದ್ದಿತು. ಈ ವರ್ಷವಂತೂ(2012)ರೂ 30 ಸಾವಿರದ ಗಡಿ ದಾಟಿತು. ಅಷ್ಟೇ ಅಲ್ಲ, ನವೆಂಬರ್‌ನಲ್ಲಿ 10 ಗ್ರಾಂ ಅಪರಂಜಿ ಚಿನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವಾದರೂ32,530ಕ್ಕೆ ಮುಟ್ಟಿತು.

ಭಾರತದಲ್ಲಿನ ಚಿನ್ನದ ಧಾರಣೆ ದೇಶದಲ್ಲಿನ ಬೇಡಿಕೆ, ಹೂಡಿಕೆ ಪ್ರಮಾಣವನ್ನಷ್ಟೇ ಅವಲಂಬಿಸಿಲ್ಲ. ಅಂತರರಾಷ್ಟ್ರೀಯ ಮಟ್ಟದ ಚಟುವಟಿಕೆಗಳಿಂದಲೂ ಪ್ರಭಾವಿತವಾಗುತ್ತಿರುತ್ತದೆ. ನ್ಯೂಯಾರ್ಕ್, ಲಂಡನ್‌ನ ಚಿನಿವಾರ ಪೇಟೆಯ ಧಾರಣೆಯನ್ನೂ ಅನುಸರಿಸುತ್ತಾ ಮೇಲೆ-ಕೆಳಗೆ ಚಲಿಸುತ್ತಲೇ ಇರುತ್ತದೆ.
ಕಳೆದ 11 ತಿಂಗಳು ಮತ್ತು 22 ದಿನಗಳಲ್ಲಿ(ಡಿ. 22ಕ್ಕೆ) ದೇಶದಲ್ಲಿ 10 ಗ್ರಾ ಚಿನ್ನರೂ3440ರಷ್ಟು (ಶೇ 12.65) ಪ್ರಮಾಣದಲ್ಲಿ ಬೆಲೆ ಹೆಚ್ಚಿಸಿಕೊಂಡಿದೆ.
ಆದರೆ, 2011ಕ್ಕೆ ಹೋಲಿಸಿದರೆ ಈ ಏರಿಕೆ ಪ್ರಮಾಣ ಅರ್ಧದಷ್ಟು ಕಡಿಮೆ ಇದೆ. 2011ರಲ್ಲಿ 10 ಗ್ರಾಂ ಚಿನ್ನದ ಧಾರಣೆರೂ6605 (ಶೇ 32.09)ರಷ್ಟು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದಿತು.

ವರ್ಷದಿಂದ ವರ್ಷಕ್ಕೆ ದರ ಹೆಚ್ಚುತ್ತಲೇ ಇದೆ ಎಂಬ ಮಾತ್ರಕ್ಕೆ ಚಿನ್ನದ ಮಾರಾಟದಲ್ಲೇನೂ ಕುಸಿತವಾಗಿಲ್ಲ. ಆಭರಣ ಖರೀದಿ ಮತ್ತು ಚಿನ್ನದ ಮೇಲಿನ ಹೂಡಿಕೆಯೂ ಹೆಚ್ಚುತ್ತಲೇ ಇದೆ.ಚಿನ್ನವಷ್ಟೇ ಅಲ್ಲ, ಬೆಳ್ಳಿ ಬೆಲೆಯೂ 2012ರಲ್ಲಿ(ಡಿ. 22ರವರೆಗೆ) ಕೆ.ಜಿ.ಗೆ ಒಟ್ಟುರೂ7220ರಷ್ಟು ದುಬಾರಿಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಿದ್ಧ ಬೆಳ್ಳಿ ಶೇ 14.17ರಷ್ಟು ಬೆಲೆ ಹೆಚ್ಚಿಸಿಕೊಂಡಿದೆ.

2011ರ ಏಪ್ರಿಲ್ 25ರಂದು ಬೆಳ್ಳಿ ಅಕ್ಷರಶಃ ಗಗನಮುಖಿಯಾಗಿತ್ತು. ಅಂದು ಸಾರ್ವಕಾಲಿಕ ಗರಿಷ್ಠ ಮಟ್ಟರೂ75,020ಕ್ಕೆ ಮುಟ್ಟಿತ್ತು. ಈ ಪ್ರಮಾಣದ ಬೆಲೆಗೆ ಹೋಲಿಸಿದರೆ ಬೆಳ್ಳಿ ಧಾರಣೆ ಈ ವರ್ಷ ತುಸು ಕಡಿಮೆ ಇದೆ ಎನ್ನಬಹುದು.

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ 10 ಗ್ರಾಂ ಚಿನ್ನರೂ100 ಏರಿಕೆ ಕಂಡರೆ, ಬೆಳ್ಳಿ ಕೆ.ಜಿ.ಗೆರೂ 800ರಷ್ಟು ಕುಸಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.