ADVERTISEMENT

ಚೀನಾ:ಗೋಲ್ಡ್ ವೆಂಡಿಂಗ್ ಯಂತ್ರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 19:30 IST
Last Updated 27 ಸೆಪ್ಟೆಂಬರ್ 2011, 19:30 IST
ಚೀನಾ:ಗೋಲ್ಡ್ ವೆಂಡಿಂಗ್ ಯಂತ್ರ
ಚೀನಾ:ಗೋಲ್ಡ್ ವೆಂಡಿಂಗ್ ಯಂತ್ರ   

ಬೀಜಿಂಗ್ (ಎಎಫ್‌ಪಿ): ನಗದು ಸ್ವೀಕರಿಸಿ ಚಿನ್ನ ನೀಡುವ  `ಗೋಲ್ಡ್ ವೆಂಡಿಂಗ್~ ಯಂತ್ರವನ್ನು ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ  ಹೊಸದಾಗಿ ಸ್ಥಾಪಿಸಲಾಗಿದೆ. ಇದು ಚೀನಾದ ಮೊದಲ `ಗೋಲ್ಡ್ ವೆಂಡಿಂಗ್~ ಯಂತ್ರವಾಗಿದ್ದು,  ಇಲ್ಲಿನ ಕೃಷಿ ವಾಣಿಜ್ಯ ಬ್ಯಾಂಕ್ ಮತ್ತು ಖಾಸಗಿ ಚಿನ್ನ ವಹಿವಾಟು ಕಂಪೆನಿಯೊಂದು ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ಗ್ರಾಹಕರು ಈ  ಯಂತ್ರದಿಂದ ಒಮ್ಮೆ ಗರಿಷ್ಠ 2.5 ಕೆ.ಜಿಗಳಷ್ಟು ಅಥವಾ ಒಂದು ದಶಲಕ್ಷ ಯೆನ್ (156,500 ಡಾಲರ್) ಮೌಲ್ಯದ ಚಿನ್ನ ಪಡೆಯಬಹುದು.  ನಗದು ಅಥವಾ ಬ್ಯಾಂಕ್ ಚೆಕ್‌ಗಳನ್ನೂ ಈ ವಹಿವಾಟಿಗೆ ಬಳಸಬಹುದು.

1 ಗ್ರಾಂ ನಿಂದ 1 ಕೆ.ಜಿವರೆಗೆ  ವಿವಿಧ ತೂಕದ, ಗಾತ್ರದ, ಚಿನ್ನದ ನಾಣ್ಯ, ಬಿಲ್ಲೆ,  ಮತ್ತು ಗಟ್ಟಿಗಳನ್ನು ವೆಂಡಿಂಗ್ ಯಂತ್ರದಲ್ಲಿ ಇಡಲಾಗಿದೆ. ಚಿನ್ನದ ಬೆಲೆಯು ಮಾರುಕಟ್ಟೆ ಏರಿಳಿತ ಆಧರಿಸಿ  ವ್ಯತ್ಯಾಸವಾಗುತ್ತಿರುತ್ತದೆ.

ಬ್ರಿಟನ್, ಅಮೆರಿಕ, ಮಧ್ಯಪ್ರಾಚ್ಯ ಮತ್ತು ಯೂರೋಪ್‌ನಲ್ಲಿ ಈಗಾಗಲೇ ಗೋಲ್ಡ್ ವೆಂಡಿಂಗ್ ಯಂತ್ರಗಳಿವೆ. ಚೀನಾವು ಪ್ರಪಂಚದಲ್ಲಿಯೇ ಎರಡನೆಯ ಅತಿ ದೊಡ್ಡ ಚಿನ್ನದ ಗ್ರಾಹಕ ದೇಶವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಬೇಡಿಕೆ ಶೇ 27ರಷ್ಟು ಹೆಚ್ಚಿದೆ. 2010ರಲ್ಲಿ 579 ಟನ್‌ಗಳಷ್ಟು ಚಿನ್ನವು ಚೀನಾದಲ್ಲಿ ವಹಿವಾಟಾಗಿತ್ತು ಎಂದು ವಿಶ್ವ ಚಿನ್ನ ಮಂಡಳಿ ಹೇಳಿದೆ.

ಭಾರತವು ಪ್ರಪಂಚದಲ್ಲಿಯೇ ಅತಿ ದೊಡ್ಡ ಚಿನ್ನದ ಗ್ರಾಹಕ ದೇಶ. ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಬೇಡಿಕೆ ಶೇ 66ರಷ್ಟು ಹೆಚ್ಚಿದ್ದು,  963 ಟನ್‌ಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.