ADVERTISEMENT

ಜಂಟಿ ಯತ್ನ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಸಾಲದ ಸಾಮರ್ಥ್ಯವನ್ನು `ಮೂಡಿಸ್~ ತಗ್ಗಿಸಿರುವುದು ದೇಶಿ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು (ಫಿಕ್ಕಿ) ಅಭಿಪ್ರಾಯಪಟ್ಟಿದೆ.

ಬ್ಯಾಂಕ್‌ನ ವಸೂಲಾಗದ ಸಾಲದ ಪ್ರಮಾಣವು ಆತಂಕಕಾರಿ ಮಟ್ಟದಲ್ಲಿ ಹೆಚ್ಚಳಗೊಳ್ಳುತ್ತಿದೆ. ಬಂಡವಾಳ ಸಂಗ್ರಹ ಅನಿಶ್ಚಿತಗೊಂಡಿದೆ. ಆರ್ಥಿಕ ಪರಿಸ್ಥಿತಿ ಉತ್ತೇಜಕರವಲ್ಲದ ಕಾರಣಕ್ಕೆ ಸರ್ಕಾರವು ಅಗತ್ಯವಾದ ಬಂಡವಾಳ ನೆರವು ನೀಡುವ ಪರಿಸ್ಥಿಯಲ್ಲಿ ಇಲ್ಲದಿರುವಾಗ `ಎಸ್‌ಬಿಐ~ನ ಹಣಕಾಸು ಸಾಮರ್ಥ್ಯ ತಗ್ಗಿಸಿರುವುದು ದೇಶದ ಒಟ್ಟಾರೆ ಬ್ಯಾಂಕಿಂಗ್ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು `ಫಿಕ್ಕಿ~ ಅಭಿಪ್ರಾಯಪಟ್ಟಿದೆ.

ಆರ್ಥಿಕ ವೃದ್ಧಿ ದರ ಕುಂಠಿತಗೊಂಡಿದೆ, ಹಣದುಬ್ಬರ ಮತ್ತು ಬಡ್ಡಿ ದರಗಳು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಉದ್ದಿಮೆ ಸಂಸ್ಥೆಗಳ ಲಾಭಕ್ಕೆ ಕತ್ತರಿ ಬೀಳುತ್ತಿದೆ. ಜತೆಗೆ ವಿದೇಶಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ದೇಶಿ ಬ್ಯಾಂಕ್‌ಗಳ ಮೇಲೆ ಒತ್ತಡ ಹೆಚ್ಚಿಸಿದೆ.

ಜಂಟಿ ಪ್ರಯತ್ನ ಅಗತ್ಯ: ಹಣದುಬ್ಬರ ನಿಗ್ರಹಿಸಲು ಭಾರತೀಯ ರಿಸರ್ವ್ ಬ್ಯಾಂಕ್, ಬಡ್ಡಿ ದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಸಾಗಿದೆ. ದುಬಾರಿ ಸಾಲವು ಯೋಜನೆಗಳ ಹೂಡಿಕೆಗೆ ಮತ್ತು ಸಾಲ ಮರುಪಾವತಿ ನಿಧಾನಗೊಳ್ಳಲು ಕಾರಣವಾಗುತ್ತದೆ ಎಂದು ಉದ್ದಿಮೆ ಸಂಸ್ಥೆಗಳು ದೂರುತ್ತಲೇ ಬಂದಿವೆ. ಗರಿಷ್ಠ ಬಡ್ಡಿ ದರಗಳು ತಂದೊಡ್ಡಿರುವ ಸಂಕಷ್ಟದಿಂದ ಬ್ಯಾಂಕ್‌ಗಳ  ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಹೆಚ್ಚಳಗೊಳ್ಳುತ್ತಲೇ ಸಾಗಿದೆ.

ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ, ದೇಶಿ ಬ್ಯಾಂಕಿಂಗ್ ವಲಯದ ಸಮಸ್ಯೆ ಪರಿಹಾರಕ್ಕೆ ಜಂಟಿಯಾಗಿ ಪ್ರಯತ್ನಿಸಬೇಕಾಗಿದೆ ಎಂದು `ಫಿಕ್ಕಿ~ ಸಲಹೆ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಗಮನವನ್ನು ಹಣದುಬ್ಬರ ನಿಯಂತ್ರಣದಿಂದ ಅಭಿವೃದ್ಧಿಯತ್ತ ಕೇಂದ್ರೀಕರಿಸಬೇಕು ಎಂದೂ `ಫಿಕ್ಕಿ~ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.