ADVERTISEMENT

ಜಿಎಸ್‌ಟಿ: ಅಮೆಜಾನ್‌ ನೆರವು ಕೇಂದ್ರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 19:30 IST
Last Updated 10 ಜುಲೈ 2017, 19:30 IST
ಜಿಎಸ್‌ಟಿ: ಅಮೆಜಾನ್‌ ನೆರವು ಕೇಂದ್ರ
ಜಿಎಸ್‌ಟಿ: ಅಮೆಜಾನ್‌ ನೆರವು ಕೇಂದ್ರ   

ಬೆಂಗಳೂರು: ಆನ್‌ಲೈನ್‌ ಮಾರುಕಟ್ಟೆ ತಾಣ (ಇ–ಕಾಮರ್ಸ್‌) ಅಮೆಜಾನ್‌ ಇಂಡಿಯಾ, ತನ್ನ ಮಾರಾಟಗಾರರಿಗೆ ಜಿಎಸ್‌ಟಿ ಬಗ್ಗೆ ಅರಿವು ಮೂಡಿಸಲು ಮತ್ತು ಹೊಸ ತೆರಿಗೆ ವ್ಯವಸ್ಥೆ ಕುರಿತು ಎದುರಾಗುವ ಸಂದೇಹಗಳನ್ನು ನಿವಾರಿಸಲು ಸಹಾಯ ಕೇಂದ್ರ (ಜಿಎಸ್‌ಟಿ ಕೆಫೆ) ಆರಂಭಿಸಿದೆ.

ಜಿಎಸ್‌ಟಿ ನೋಂದಣಿ, ರಿಟರ್ನ್‌ ಸಲ್ಲಿಕೆ ಕುರಿತು ಮಾರಾಟಗಾರರಿಗೆ ಮಾರ್ಗದರ್ಶನ ಮಾಡಲು ಈ  ಕೇಂದ್ರ ನೆರವಾಗುತ್ತಿದೆ. ಮಾರಾಟಗಾರರು ದೂರವಾಣಿ ಮತ್ತು ವಿಡಿಯೊ ಮೂಲಕ  ತಜ್ಞರ ಸಲಹೆ ಪಡೆಯಬಹುದು.

‘ಜಿಎಸ್‌ಟಿ ಜಾರಿಗೆ ಬರುತ್ತಿದ್ದಂತೆ ಗ್ರಾಹಕರಿಗೆ ಬೆಲೆ ಏರಿಳಿತದ ಪರಿಣಾಮ ಅನುಭವಕ್ಕೆ ಬರುತ್ತಿದೆ. ತಿಂಗಳಾಂತ್ಯದಲ್ಲಿ  ರಿಟರ್ನ್‌ ಸಲ್ಲಿಸುವಾಗ ಮಾರಾಟಗಾರರಿಗೆ ಹೊಸ ತೆರಿಗೆ ವ್ಯವಸ್ಥೆಯು ಅನುಭವಕ್ಕೆ ಬರಲಿದೆ’ ಎಂದು ಅಮೆಜಾನ್‌ ಇಂಡಿಯಾದ  ನಿರ್ದೇಶಕ ವಿವೇಕ್‌ ಸೋಮರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಜಿಎಸ್‌ಟಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಈ ಕೇಂದ್ರ ಒದಗಿಸಲಿದೆ.  ವಿಡಿಯೊ ಮತ್ತು ದೂರವಾಣಿ ಮೂಲಕ ಸಂಸ್ಥೆಯ ಮಾರಾಟಗಾರರು ತಮ್ಮೆಲ್ಲ ಅನುಮಾನಗಳನ್ನು ಇಲ್ಲಿ ಬಗೆಹರಿಸಿಕೊಳ್ಳ ಬಹುದು.

‘ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್‌) ಮತ್ತು ಮೂಲದಲ್ಲಿಯೇ ತೆರಿಗೆ ಸಂಗ್ರಹ (ಟಿಸಿಎಸ್‌) ಮುಂದೂಡಿರುವುದು ಇ–ಕಾಮರ್ಸ್‌ ವಹಿವಾಟುದಾರರಿಗೆ ಅನುಕೂಲವಾಗಿದೆ.

‘ಟಿಸಿಎಸ್‌ನಿಂದಾಗಿ ಮಾರಾಟಗಾರರು ಇನ್‌ಪುಟ್‌ ಕ್ರೆಡಿಟ್‌ ಟ್ಯಾಕ್ಸ್‌ ಮರಳಿ ಪಡೆಯಲು ಕೆಲ ಸಮಯ ಹಿಡಿಯುತ್ತದೆ. ತೆರಿಗೆ ರೂಪದಲ್ಲಿ ಮುರಿದುಕೊಂಡ ಮೊತ್ತ ಮರಳಿ ಬರಲು ಕಾಲಮಿತಿ ನಿಗದಿಪಡಿಸಿಲ್ಲ. ಹೀಗಾಗಿ ಉದ್ದಿಮೆದಾರರ ದುಡಿಯುವ ಬಂಡವಾಳ ಅನುಪಯುಕ್ತವಾಗಿರುತ್ತಿತ್ತು.  ಸದ್ಯಕ್ಕೆ ಈ ಎರಡೂ ನಿಯಮಗಳನ್ನು ಮುಂದೂಡಿರುವುದು ಇ–ಕಾಮರ್ಸ್‌ ವಹಿವಾಟಿಗೆ ನೆರವಾಗುತ್ತಿದೆ’ ಎಂದು ವಿವೇಕ್‌ ಅಭಿಪ್ರಾಯಪಟ್ಟಿದ್ದಾರೆ.

‘ಇ–ವೇ ಬಿಲ್‌ ಮುಂದೂಡಿರುವುದು  ಸರಿಯಾಗಿದೆ. ಕರ್ನಾಟಕ ಸರ್ಕಾರದ ‘ಇ–ಸುಗಮ’ ಆಧರಿಸಿಯೇ ಇ–ವೇ ಬಿಲ್‌ ರೂಪಿಸಲಾಗಿದೆ. ಇದರಿಂದಾಗಿ ಸರಕುಗಳ ಸಾಗಾಣಿಕೆಯಲ್ಲಿನ ವಿಳಂಬ ತಪ್ಪಲಿದೆ’ ಎಂದರು.

ಬೆಂಗಳೂರು ಸೇರಿದಂತೆ ದೇಶದ 11 ನಗರಗಳಲ್ಲಿ ಇಂತಹ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ ಸಂಸ್ಥೆಯ  12 ಸಾವಿರದಷ್ಟು ಮಾರಾಟಗಾರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.