ನವದೆಹಲಿ (ಪಿಟಿಐ): ಮಾರುಕಟ್ಟೆಯಲ್ಲಿನ ಹಲವು ಸಂಕಷ್ಟಗಳ ನಡುವೆಯೂ ದೇಶದ ರಸ್ತೆಗಳಿಗೆ ಜೂನ್‌ನಲ್ಲಿ ಹೊಸದಾಗಿ ಒಂದು ಲಕ್ಷದ ಐವತ್ತೈದು ಸಾವಿರದ ಏಳು ನೂರ ಅರವತ್ತ ಮೂರು ಕಾರುಗಳು ಪ್ರವೇಶಿಸಿವೆ.
2011ರ ಜೂನ್‌ಗೆ(1,43,851) ಹೋಲಿಸಿದಲ್ಲಿ ಕಾರುಗಳ ಮಾರಾಟ ಸಂಖ್ಯೆಯಲ್ಲಿ ಶೇ 8.28ರಷ್ಟು ಹೆಚ್ಚಳವಾಗಿದೆ.
`ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್~(ಎಸ್‌ಐಎಎಂ) ಮಂಗಳವಾರ ಈ ಅಂಕಿ-ಅಂಶ ಬಿಡುಗಡೆ ಮಾಡಿದೆ.
`ಈ ವರ್ಷವೂ ಕಾರಿನ ಮಾರಾಟದಲ್ಲಿ ಪ್ರಗತಿಯಾಗಿದೆ ಎಂದು ಹರ್ಷ ಪಡುವಂತಿಲ್ಲ. ಕಳೆದ ವರ್ಷದ ಜೂನ್‌ನಲ್ಲಿ ಕಾರು ಮಾರಾಟವೇ ಬಹಳ ಕಡಿಮೆ ಇದ್ದಿತು. ಕಾರಣ, ಮಾನೆಸರ್‌ನಲ್ಲಿನ ಮಾರುತಿ ಕಾರು ತಯಾರಿಕಾ ಘಟಕದಲ್ಲಿ ಕಾರ್ಮಿಕರ ಮುಷ್ಕರದಿಂದಾಗಿ ಕಾರು ತಯಾರಿಕೆಯೇ ತಗ್ಗಿದ್ದಿತು. ಹಾಗಾಗಿ ಈ ಜೂನ್‌ನಲ್ಲಿ ಹೆಚ್ಚು ಕಾರು ಮಾರಾಟವಾಗಿರುವಂತೆ ಕಾಣುತ್ತಿದೆ ಅಷ್ಟೆ~ ಎಂದು `ಎಸ್‌ಐಎಎಂ~ನ ಹಿರಿಯ ನಿರ್ದೇಶಕ ಸುಗತೊ ಸೇನ್ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ್ದಾರೆ.
ಒಂದು ವರ್ಷದ ಹಿಂದೆ ದೀರ್ಘಾವಧಿ ಮುಷ್ಕರದಿಂದಾಗಿ ಕಂಗೆಟ್ಟಿದ್ದ `ಮಾರುತಿ ಸುಜುಕಿ ಇಂಡಿಯ~ ಕಂಪೆನಿ ಕೇವಲ 57,653 ಕಾರುಗಳನ್ನಷ್ಟೇ ಮಾರಾಟ ಮಾಡಿದ್ದಿತು. ಈ ವರ್ಷದ ಜೂನ್‌ನಲ್ಲಿ 70,977 ಕಾರುಗಳನ್ನು (ಶೇ 23.11 ಅಧಿಕ) ಮಾರಿದೆ.
ಹುಂಡೈ ಮೋಟಾರ್ ಇಂಡಿಯ ಲಿ., ಅಲ್ಪ ಪ್ರಮಾಣದ ಪ್ರಗತಿಯೊಂದಿಗೆ ಈ ಜೂನ್‌ನಲ್ಲಿ 30,362 ಕಾರುಗಳನ್ನು ರಸ್ತೆಗಿಳಿಸಿದೆ. ಕಳೆದ ಜೂನ್‌ನಲ್ಲಿ 30,302 ಕಾರು ಮಾರಾಟವಾಗಿತ್ತು.
ಮಾರುಕಟ್ಟೆಯ ಇನ್ನೊಂದು ತುದಿಯಲ್ಲಿರುವ ಟಾಟಾ ಮೋಟಾರ್ಸ್ ಭಾರಿ ಹಿನ್ನಡೆ ಅನುಭವಿಸಿದೆ. ಅದರ ಕಾರುಗಳು ಮಾರುಕಟ್ಟೆಯಲ್ಲಿ ಶೇ 26.6ರಷ್ಟು ವೇಗ ಕಳೆದುಕೊಂಡಿವೆ. ಅಂದರೆ, 2011ರ ಜೂನ್‌ನಲ್ಲಿ 18,522 ಕಾರುಗಳನ್ನು ಮಾರಿದ್ದ ಟಾಟಾ ಮೋಟಾರ್ಸ್, ಈಗ ಕೇವಲ 13,595 ಕಾರುಗಳಿಗಷ್ಟೇ ಗ್ರಾಹಕರನ್ನು ಪಡೆಯಲು ಸಾಧ್ಯವಾಗಿದೆ.
`ವಾಸ್ತವವಾಗಿ ಕಾರುಗಳ ಮಾರಾಟ ಸದ್ಯ ಬಹಳ ಮಂದಗತಿಯಲ್ಲಿದೆ. ಅದಕ್ಕೆ ಕಾರಣ ಏನು ಎನ್ನುವುದೂ ಸಹ ಎಲ್ಲರಿಗೂ ತಿಳಿದಿರುವಂತಹುದೇ ಆಗಿದೆ. ಪೆಟ್ರೋಲ್ ದರ ಈ ಪರಿ ಏರಿದರೆ ಅದು ವಾಹನ ಉದ್ಯಮದ ಮೇಲೆ ಪರಿಣಾಮ ಬೀರದೇ ಇರದು~ ಎಂದು `ಎಸ್‌ಎಐಎಂ~ನ ಅಧ್ಯಕ್ಷ ಎಸ್.ಶಾಂಡಿಲ್ಯ ವಿಶ್ಲೇಷಿಸಿದ್ದಾರೆ.
ಇದೇ ವೇಳೆ ದೇಶದಲ್ಲಿ ಮೋಟಾರ್ ಬೈಕ್ ಮಾರಾಟದಲ್ಲಿ ಹೇಳಿಕೊಳ್ಳುವಂಥ ವೃದ್ಧಿ ಕಂಡುಬಂದಿಲ್ಲ. 2011ರ ಜೂನ್‌ನಲ್ಲಿ 8,25,388 ಬೈಕ್ ಮಾರಾಟವಾಗಿದ್ದವು. ಈ ವರ್ಷದ ಜೂನ್‌ನಲ್ಲಿ ಇದರ ಸಂಖ್ಯೆ 8,79,713ಕ್ಕೆ ಏರಿದೆ. ಅಂದರೆ, ಕೇವಲ ಶೇ 6.58ರಷ್ಟು ಪ್ರಗತಿಯಷ್ಟೇ ದಾಖಲಾಗಿದೆ.
ಪ್ರಸ್ತುತ ಮೋಟಾರ್ ಬೈಕ್ ಮಾರುಕಟ್ಟೆಯ ಮುಂಚೂಣಿ ಕಂಪೆನಿ `ಹೀರೊ ಮೊಟೊಕಾರ್ಪ್~ ಸಾಧನೆಯೂ ಹೇಳಿಕೊಳ್ಳುವಂತಿಲ್ಲ. ಕಳೆದ ಜೂನ್‌ನಲ್ಲಿ 4.66 ಲಕ್ಷ ಬೈಕ್ ಮಾರಿದ್ದ `ಹೀರೊ~ ಈ ಜೂನ್‌ನಲ್ಲಿ 4.89 ಲಕ್ಷ ವಾಹನಕ್ಕೇ ಸಮಾಧಾನ ಪಟ್ಟುಕೊಂಡಿದೆ. ಆ ಮೂಲಕ ಶೇ 4.93ರ ಅಲ್ಪ ಹೆಚ್ಚಳವನ್ನಷ್ಟೇ ಕಂಡಿದೆ.
ಬಜಾಜ್ ಆಟೊ ಪ್ರಗತಿಯೂ ಗಮನಕ್ಕೇ ಬಾರದಷ್ಟು (ಶೇ 1.25) ಪ್ರಮಾಣದಲ್ಲಿದೆ. 2.08 ಲಕ್ಷ ಮೋಟಾರ್ ಬೈಕ್‌ಗೆ ಬದಲು ಈಗ 2.11 ಲಕ್ಷ ಬೈಕ್‌ಗಳನ್ನಷ್ಟೇ ರಸ್ತೆಗಿಳಿಸಲು ಬಜಾಜ್‌ಗೆ ಸಾಧ್ಯವಾಗಿದೆ.
ಇದ್ದುದರಲ್ಲಿಯೇ `ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯ~(ಎಚ್‌ಎಂಎಸ್‌ಐ) ತುಸು ವೇಗದಲ್ಲಿದೆ. 2011ರ ಜೂನ್‌ನಲ್ಲಿ 61,435 ಬೈಕ್ ಮಾರಿದ್ದ ಕಂಪೆನಿ, ಈ ಬಾರಿ 95,315 ಹೊಸ ಗ್ರಾಹಕರನ್ನು ಗಿಟ್ಟಿಸಿಕೊಂಡಿದೆ.
ಟಿವಿಎಸ್ ಮೋಟಾರ್ ಕಂಪೆನಿಯ ಬೈಕ್‌ಗಳಿಗೆ ಬೇಡಿಕೆ ಕಡಿಮೆ ಆಗಿರುವಂತಿದೆ. ಕಳೆದ ಜೂನ್‌ನಲ್ಲಿ 50,835 ಬೈಕ್ ಮಾರಿದ್ದ `ಟಿವಿಎಸ್~, ಈ ಬಾರಿ ಕೇವಲ 44,375 ವಾಹನಗಳನ್ನಷ್ಟೇ ರಸ್ತೆಗಿಳಿಸಲು ಶಕ್ಯವಾಗಿದೆ. ಅಂದರೆ, 6460 ಬೈಕ್‌ಮಾರಾಟ ಕಡಿಮೆಯಾಗಿದೆ.
ಒಟ್ಟು ಬೈಕ್ ಸಾಧನೆ: ಒಟ್ಟಾರೆ ದೇಶದ ಮೋಟಾರ್ ಬೈಕ್ ಉದ್ಯಮದಲ್ಲಿ ಶೇ 9.2ರಷ್ಟು ಪ್ರಗತಿ ಕಂಡುಬಂದಿದೆ. 2011ರ ಜೂನ್‌ನ 10.71 ಲಕ್ಷ ಬೈಕ್‌ಗೆ ಬದಲಾಗಿ ಈ ಜೂನ್‌ನಲ್ಲಿ 11.69 ಲಕ್ಷದಷ್ಟು ಮಾರಾಟವಾಗಿವೆ.
ಸ್ಕೂಟರ್‌ಗಳ ಕಥೆ: ಇತ್ತೀಚಿನ ದಿನಗಳಲ್ಲಿ ಹೆಚ್ಚು ವನಿತೆಯರು ಸ್ಕೂಟರ್ ಸವಾರಿ ಆರಂಭಿಸಿರುವುದರಿಂದ ಈ ಮಾರುಕಟ್ಟೆ ಉತ್ತಮ ಪ್ರಗತಿ ಕಾಣುತ್ತಿದೆ. 2011ರ ಜೂನ್‌ನಲ್ಲಿ 1.82 ಲಕ್ಷ ಸ್ಕೂಟರ್ ಮಾರಾಟವಾಗಿದ್ದವು.
ಈ ಜೂನ್‌ನಲ್ಲಿ ಅದು 2.24 ಲಕ್ಷಕ್ಕೇರಿದೆ. ಅಂದರೆ, 41,900 ಸ್ಕೂಟರ್ ಮಾರಾಟ ಹೆಚ್ಚಿದೆ. ಇದರಲ್ಲಿ `ಎಚ್‌ಎಂಎಸ್‌ಐ~ ಪಾಲು ದೊಡ್ಡದಿದೆ. ವರ್ಷದ ಹಿಂದಿನ ಜೂನ್‌ನಲ್ಲಿ ಕೇವಲ 76,310 ಸ್ಕೂಟರ್ ಮಾರಿದ್ದ ಈ ಕಂಪೆನಿ, ತನ್ನ ಮಾರುಕಟ್ಟೆ ಸಾಮರ್ಥ್ಯವನ್ನು ಈ ಜೂನ್‌ನಲ್ಲಿ 1,20,893 ಸ್ಕೂಟರ್‌ಗಳಿಗೆ ಹೆಚ್ಚಿಸಿಕೊಂಡಿದೆ.
ಕಾರು ಶೇ 9 ಪ್ರಗತಿ ನಿರೀಕ್ಷೆ
ಪ್ರಸಕ್ತ ವರ್ಷದಲ್ಲಿ ದೇಶದಲ್ಲಿ ಕಾರುಗಳ ಮಾರಾಟದಲ್ಲಿ ಶೇ 9ರಿಂದ 11ರಷ್ಟು ಪ್ರಗತಿ ಕಾಣಬಹುದಾಗಿದೆ ಎಂದು `ಎಸ್‌ಐಎಎಂ~ ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ಅಂದಾಜು ಮಾಡಿದೆ.
ದೇಶದ ಮೇಲಿನ ಸ್ತರದಲ್ಲಿನ ಆರ್ಥಿಕ ಪರಿಸ್ಥಿತಿ ಸ್ವಲ್ಪ ದುರ್ಬಲವಾಗಿರುವ ಪರಿಣಾಮ ಕಾರು ಮಾರುಕಟ್ಟೆಯ ಸಾಧನೆ ಈ ವರ್ಷ ಸಾಧಾರಣ ಮಟ್ಟದಲ್ಲಿರಲಿದೆ. ಏಕೆಂದರೆ ಕಾರುಗಳ ಬೆಲೆ ಏರಿದೆ, ವಾಹನ ಸಾಲದ ಬಡ್ಡಿಯೂ ಶೇ 12ರಿಂದ 15.3ರವರೆಗೆ ಏರಿಕೆಯಾಗಿದೆ ಹಾಗೂ ಪೆಟ್ರೋಲ್ ದರವೂ ಶರವೇಗದಲ್ಲಿ ಏರುತ್ತಲೇ ಇದ್ದು ವಾಹನ ನಿರ್ವಹಣೆ ವೆಚ್ಚ ಶೇ 2ರಿಂದ 4ರಷ್ಟು ಹೆಚ್ಚಿದೆ. ಇನ್ನೊಂದೆಡೆ ತಲಾವಾರು ಆದಾಯದಲ್ಲಿಯೇನೂ ಅಂತಹ ಹೆಚ್ಚಳವಾಗಿಲ್ಲ. ಈ ಎಲ್ಲ ಅಂಶವೂ ಕಾರುಗಳ ಮಾರುಕಟ್ಟೆಯ ವೇಗಕ್ಕೆ ತಡೆಯೊಡ್ಡಲಿದೆ ಎಂದಿದೆ ವಾಹನ ಉದ್ಯಮದ ಈ ಪ್ರಾತಿನಿಧಿಕ ಸಂಸ್ಥೆ.
ಆದರೆ, ಒಟ್ಟಾರೆ ವಾಹನಗಳ ಮಾರಾಟದಲ್ಲಿ ಮಾತ್ರ ಉತ್ತಮ ಪ್ರಗತಿ ನಿರೀಕ್ಷಿಸಬಹುದಾಗಿದೆ ಎಂದು ಎಸ್‌ಐಎಎಂ ಮಾರುಕಟ್ಟೆ ಮುನ್ನೋಟ ನೀಡಿದೆ.
ಇದೇ ವೇಳೆ, ಜಪಾನ್ ಮತ್ತು ಅಮೆರಿಕ ವಾಹನ ಮಾರುಕಟ್ಟೆ ಉತ್ತಮವಾಗಿಯೇ ಇದೆ. ಆದರೆ, ಚೀನಾ, ಬ್ರೆಜಿಲ್ ಹಾಗೂ ಯೂರೋಪ್ ದೇಶಗಳಲ್ಲಿನ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ ಎಂದು ಎಸ್‌ಐಎಎಂ ಅಧ್ಯಕ್ಷ ಶಾಂಡಿಲ್ಯ ವಿಶ್ಲೇಷಿಸಿದ್ದಾರೆ.
14.86 ಲಕ್ಷ ವಾಹನ
ಕಾರು, ಬೈಕ್, ಸ್ಕೂಟರ್, ತ್ರಿಚಕ್ರ ವಾಹನ, ಲಾರಿ, ಮಿನಿ ಲಾರಿ ಸೇರಿದಂತೆ ದೇಶದಲ್ಲಿನ ಎಲ್ಲ ಬಗೆಯ ವಾಹನಗಳ ಕ್ಷೇತ್ರದ ಒಟ್ಟಾರೆ ಮಾರಾಟದಲ್ಲಿ ಕಳೆದ ಜೂನ್‌ನಲ್ಲಿ ಶೇ 9.05ರಷ್ಟು ಪ್ರಗತಿಯಾಗಿದೆ.
2011ರ ಜೂನ್‌ನಲ್ಲಿ 13.62 ಲಕ್ಷ ವಾಹನಗಳು ಮಾರಾಟವಾಗಿದ್ದವು. 2012ರ ಜೂನ್‌ನಲ್ಲಿ ಹೊಸದಾಗಿ 14.86 ಲಕ್ಷ ವಾಹನಗಳು ರಸ್ತೆಗಿಳಿದಿವೆ ಎಂದು `ಎಸ್‌ಐಎಎಂ~ ಹೇಳಿದೆ.
`ದುಬಾರಿ~ ಕಾರುಬಾರು
ಇದೆಲ್ಲದರ ಮಧ್ಯೆ ದುಬಾರಿ ಮತ್ತು ಅದ್ದೂರಿ ಕಾರುಗಳ ಮಾರುಕಟ್ಟೆಯಲ್ಲಿ ನಂ 1 ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ಜರ್ಮನಿಯ `ಆಡಿ~ ಕಾರು ಮತ್ತು `ಬಿಎಂಡಬ್ಲ್ಯು~ ಹಾಗೂ `ಮರ್ಸಿಡಿಸ್ ಬೆಂಜ್~ ಕಾರುಗಳ ನಡುವೆ ಮಾರುಕಟ್ಟೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಸ್ಥರ್ಧೆ ನಡೆದಿದೆ.
`ಆಡಿ~ 1908 ಕಾರು ಮಾರಾಟದೊಂದಿಗೆ ಶೇ 52.15ರಷ್ಟು ಸಾಧನೆಯೊಂದಿಗೆ ಅತ್ಯುತ್ಸಾಹದಲ್ಲಿದೆ. `ಬಿಎಂಡಬ್ಲ್ಯು~ 2377 ಕಾರುಗಳನ್ನು ಮಾರಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 12.16ರ ಹೆಚ್ಚಳವನ್ನಷ್ಟೇ ಸಾಧಿಸಿದೆ.
ಆದರೆ, ಮರ್ಸಿಡಿಸ್ ಬೆಂಜ್ ಕಾರುಗಳ ಮಾರಾಟ ಶೇ 24.41ರಷ್ಟು ಕುಸಿದಿದೆ. 2011ರಲ್ಲಿ 1663 ಬೆಂಜ್ ಕಾರು ಮಾರಾಟವಾಗಿದ್ದರೆ, ಈ ಜೂನ್‌ನಲ್ಲಿ 1257 ಕಾರುಗಳಿಗಷ್ಟೇ ಗ್ರಾಹಕರು ದೊರಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.