ADVERTISEMENT

ಜೈವಿಕ ಡೀಸೆಲ್‌ 5 ವರ್ಷದಲ್ಲಿ ಸಾರ್ವಜನಿಕ ಬಳಕೆಗೆ

ಕೃಷಿ ವಿವಿಯಲ್ಲಿ ₨10 ಕೋಟಿ ವೆಚ್ಚದ ಇಂಧನ ಸ್ನೇಹಿ ಪಾರ್ಕ್

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 19:30 IST
Last Updated 11 ಜನವರಿ 2014, 19:30 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ಅರಣ್ಯ ವಿಭಾಗದಲ್ಲಿನ ಜೈವಿಕ ಇಂಧನ ತಯಾರಿಕಾ ಘಟಕದಲ್ಲಿ ಡೀಸೆಲ್‌ ತಯಾರಿಕೆಗೆ ಹೊಂಗೆ ಬೀಜವನ್ನು ಯಂತ್ರಕ್ಕೆ ಸುರಿಯುತ್ತಿರುವುದು					ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ಅರಣ್ಯ ವಿಭಾಗದಲ್ಲಿನ ಜೈವಿಕ ಇಂಧನ ತಯಾರಿಕಾ ಘಟಕದಲ್ಲಿ ಡೀಸೆಲ್‌ ತಯಾರಿಕೆಗೆ ಹೊಂಗೆ ಬೀಜವನ್ನು ಯಂತ್ರಕ್ಕೆ ಸುರಿಯುತ್ತಿರುವುದು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ   

ಹುಬ್ಬಳ್ಳಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಾರ್ವಜನಿಕರಿಗೆ ಜೈವಿಕ ಡೀಸೆಲ್ ಮಾರಾಟಕ್ಕೆ ಬಂಕ್‌ ಸ್ಥಾಪನೆ ಸೇರಿದಂತೆ ಅತ್ಯಾಧುನಿಕ ಇಂಧನ ಸ್ನೇಹಿ ಪಾರ್ಕ್‌ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (ಕೆಎಸ್‌ಬಿಡಿಬಿ) ಹಾಗೂ ಕೃಷಿ ವಿಶ್ವವಿದ್ಯಾಲಯದ ನಡುವಿನ ಒಡಂಬಡಿಕೆ ಹಿನ್ನೆಲೆಯಲ್ಲಿ ಹಾಸನ, ಯಾದಗಿರಿಯ ನಂತರ ಇದೀಗ ಧಾರವಾಡದಲ್ಲಿ ರಾಜ್ಯದ ಮೂರನೇ ಜೈವಿಕ ಇಂಧನ ಪಾರ್ಕ್ ನಿರ್ಮಾಣವಾಗುತ್ತಿದೆ.

‘ಯೋಜನೆಗಾಗಿ ವಿ.ವಿ ಆವರಣದಲ್ಲಿ 45 ಎಕರೆ ಜಮೀನು ನೀಡಲಾಗಿದೆ. ₨10 ಕೋಟಿ ಮಂಜೂರು ಆಗಿದೆ. ಪ್ರಾಥಮಿಕ ಹಂತದ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲು ಈಗಾಗಲೇ ಸರ್ಕಾರ ₨40 ಲಕ್ಷ ಬಿಡುಗಡೆ ಮಾಡಿದೆ’ ಎನ್ನುತ್ತಾರೆ ವಿವಿಯ
ಕೃಷಿ ಅರಣ್ಯ ವಿಭಾಗದ ಮುಖ್ಯಸ್ಥ ಹಾಗೂ ಯೋಜನೆಯ ನೋಡಲ್‌ ಅಧಿಕಾರಿ ಡಾ.ಜೆ.ಎಸ್‌.ಪಾಟೀಲ.

ಪೆಟ್ರೋಲಿಯಂ ಉತ್ಪನ್ನಗಳ ಬದಲಿಗೆ ಜೈವಿಕ ಇಂಧನ ಬಳಕೆಯನ್ನು ಸಾರ್ವಜನಿಕ ವಲಯದಲ್ಲಿ ಪ್ರೋತ್ಸಾಹಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಜೈವಿಕ ಇಂಧನಜನ್ಯ ಸಸ್ಯಗಳಾದ ಹೊಂಗೆ, ಸುರ­ಹೊನ್ನೆ, ಬೇವು, ಸೀಮಾರೂಬ, ಜತ್ರೋಫ, ಹಿಪ್ಪೆ ಮೊದ­ಲಾದ ವೃಕ್ಷಗಳನ್ನು ಬೆಳೆಸಿ ಅದರ ಬೀಜಗಳಿಂದ ವಿವಿ ಆವರಣದಲ್ಲಿಯೇ ಡೀಸೆಲ್ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ. ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಇಂಧನ ಮಾರಾಟ ಆರಂಭವಾಗಲಿದೆ. 

ಈಗಾಗಲೇ ಇಲ್ಲಿನ ಕೃಷಿ ಅರಣ್ಯ ವಿಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಜೈವಿಕ ಇಂಧನ ತಯಾರಿಕೆ ಘಟಕ ಆರಂಭಿಸಲಾಗಿದೆ. ಇಲ್ಲಿ ಉತ್ಪಾದಿಸುವ ಜೈವಿಕ ಡೀಸೆಲನ್ನು ಟ್ರ್ಯಾಕ್ಟರ್, ಜೀಪುಗಳಿಗೆ ಬಳಸಲಾಗುತ್ತಿದೆ. ಒಂದು ಲೀಟರ್‌ ಜೈವಿಕ ಡೀಸೆಲ್‌ ತಯಾರಿಸಲು ₨ 8೦ ರಿಂದ ೮೫ ಖರ್ಚಾಗುತ್ತಿದೆ. ಇಂಧನ ತೈಲ ಸಂಸ್ಕರಿಸಿದ ನಂತರ ಉಳಿಯುವ ತ್ಯಾಜ್ಯವನ್ನು  (ಕೇಕ್‌) ಸಾವಯವ ಕೃಷಿಯಲ್ಲಿ ಬಳಕೆಗಾಗಿ ಮಾರಾಟ ಮಾಡುವುದರಿಂದ ಈ ಖರ್ಚು ₨ 55ಕ್ಕೆ ಇಳಿಯಲಿದೆ ಜೊತೆಗೆ ಗ್ಲಿಸೆರಿನ್‌, ವ್ಯಾಸೆಲಿನ್‌, ಸೋಪು ಸೇರಿದಂತೆ ವಿವಿಧ ವಸ್ತುಗಳ ತಯಾರಿಕೆಯಿಂದ ಖರ್ಚು ಇನ್ನಷ್ಟು ತಗ್ಗಲಿದೆ.

ಸರ್ಕಾರ ನಿಗದಿ ಪಡಿಸಿದ ಬೆಂಬಲ ಬೆಲೆಯಲ್ಲಿ (ಕೆ.ಜಿಗೆ ₨15) ರೈತರಿಂದಲೂ ಇಂಧನಜನ್ಯ ಸಸ್ಯಗಳ ಬೀಜಗಳನ್ನು ಖರೀದಿಸಲಾಗುವುದು. ಜತೆಗೆ ಎತ್ತಿನ­ಗುಡ್ಡದ ಸಮೀಪ 20 ಎಕರೆ  ಪ್ರದೇಶದಲ್ಲಿ ಇಂಧನ­ಜನ್ಯವನ ಬೆಳೆಸುವ ಉದ್ದೇಶದಿಂದ ಈಗಾಗಲೇ ಒಂದು ಲಕ್ಷ ಸಸಿಗಳನ್ನು ವಿಭಾಗದ ಆವರಣದಲ್ಲಿ ಬೆಳೆಸ­ಲಾಗಿದೆ. ಒಂದು ಲೀಟರ್ ಜೈವಿಕ ಇಂಧನ ತಯಾರಿ­ಕೆಗೆ ಕನಿಷ್ಠ ಮೂರು ಕೆ.ಜಿ ಹೊಂಗೆ ಬೀಜ ಬೇಕು. ಹಾಲಿ ಇರುವ ಘಟಕದಲ್ಲಿ ಗಂಟೆಗೆ ಐದು ಲೀಟರ್‌ ಡೀಸೆಲ್‌ ತಯಾರಿಸಲಾಗುತ್ತಿದೆ. ಬಂಕ್ ಮೂಲಕ ಜೈವಿಕ ಡೀಸೆಲ್‌ ಮಾರಾಟದ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಲು ವಿ.ವಿ ಉದ್ದೇಶಿಸಿದೆ ಎಂದು ಡಾ. ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.