ADVERTISEMENT

ಟಿಟಿಕೆ ಪ್ರೆಸ್ಟೀಜ್‌ಜರ್ಮನಿಯ ಷಾಟ್ ತಂತ್ರಜ್ಞಾನ ಮೈತ್ರಿ

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST

ಬೆಂಗಳೂರು: ಆಧುನಿಕ ಶೈಲಿ ಅಡುಗೆ ಪರಿಕರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ, ಟಿಟಿಕೆ ಸಮೂಹದ `ಪ್ರೆಸ್ಟೀಜ್~ ಹಾಗೂ ಅತ್ಯಾಧುನಿಕ ಗಾಜಿನ ಪರಿಕರ ತಯಾರಿಕೆಯಲ್ಲಿ ವಿಶಿಷ್ಟ ತಂತ್ರಜ್ಞಾನ ಹೊಂದಿರುವ ಜರ್ಮನಿಯ `ಷಾಟ್~ ಕಂಪೆನಿ ನಡುವೆ ಮೈತ್ರಿ ಏರ್ಪಟ್ಟಿದ್ದು, `ತಂತ್ರಜ್ಞಾನ ವಿನಿಮಯ-ವಾಣಿಜ್ಯ ಸಹಕಾರ~ದ ಒಪ್ಪಂದವಾಗಿದೆ.

ಎರಡೂ ಕಂಪೆನಿ ಸೇರಿ `ಪ್ರೆಸ್ಟೀಜ್ ಪ್ರೀಮಿಯ~ ಬ್ರಾಂಡ್‌ನಡಿ ಅಭಿವೃದ್ಧಿಪಡಿಸಿದ ಗಾಜಿನ ಮೇಲ್ಮೈನ, 4 ಬರ್ನರ್‌ಗಳ (ರೂ 10000) ಗ್ಯಾಸ್ ಸ್ಟೌ ಮತ್ತು `ಷಾಟ್~ನ ತಂತ್ರಜ್ಞಾನವೊಳಗೊಂಡ ಇಂಡಕ್ಷನ್ ಸ್ಟೌ(ರೂ 5500)ಗಳನ್ನು ಕರ್ನಾಟಕದ ಮಾರುಕಟ್ಟೆಗೆ ಶುಕ್ರವಾರ ಬಿಡುಗಡೆ ಮಾಡಲಾಯಿತು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ `ಪ್ರೆಸ್ಟೀಜ್~ ವ್ಯವಸ್ಥಾಪಕ ನಿರ್ದೇಶಕ ಎಸ್.ರವಿಚಂದ್ರನ್, ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ 23.81 ಕೋಟಿ ಮನೆಗಳಿವೆ. ಅವಿಭಕ್ತ ಕುಟುಂಬ ಪದ್ಧತಿ ಇಲ್ಲವಾಗುತ್ತಾ ಸಣ್ಣ ಕುಟುಂಬಗಳ ಸಂಖ್ಯೆ ದ್ವಿಗುಣವಾಗುತ್ತಿದೆ.

ಪ್ರತಿ ಮನೆಯ ವರಮಾನವೂ ಹೆಚ್ಚುತ್ತಿದೆ. ಮಧ್ಯಮ ವರ್ಗದವರ ಆರ್ಥಿಕ ಸಾಮರ್ಥ್ಯವೂ  ವೃದ್ಧಿಸುತ್ತಿದೆ. ಈ ಅಂಶವೆಲ್ಲವೂ ಆಧುನಿಕ ಶೈಲಿ ಗೃಹ ಬಳಕೆ ಸಾಧನಗಳ ಮಾರುಕಟ್ಟೆ ಬೆಳವಣಿಗೆಗೆ ಕಾರಣವಾಗಿವೆ ಎಂದರು.

ಅಡುಗೆ ಪರಿಕರ ಉದ್ಯಮ ಶೇ 18ರಷ್ಟು ಬೆಳೆಯುತ್ತಿದ್ದರೆ, ಪ್ರೆಸ್ಟೀಜ್ ಕಳೆದ ವರ್ಷ ಶೇ 45ರಷ್ಟು ಪ್ರಗತಿ ಕಂಡಿದೆ. 2007ರಲ್ಲಿ ರೂ341 ಕೋಟಿ ವಹಿವಾಟು ನಡೆಸಿದ್ದ ಕಂಪೆನಿ 2011ರಲ್ಲಿ ರೂ1123 ಕೋಟಿಗೆ ಪ್ರಗತಿ ಕಂಡಿದೆ ಎಂದರು.

ದೇಶದ ನಗರಗಳ ಶೇ 75 ಮನೆಗಳಲ್ಲಿ, ಹಳ್ಳಿಗಳ ಶೇ 26 ಮನೆಗಳಲ್ಲಿ ಎಲ್‌ಪಿಜಿ ಸಂಪರ್ಕವಿದೆ. ಹಾಗಾಗಿ ನಮ್ಮ ಎರಡೂ ಹೊಸ ಪರಿಕರಗಳಿಗೆ ದೇಶದ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

125 ವರ್ಷ ಇತಿಹಾಸದ `ಷಾಟ್~ ಕಂಪೆನಿಯ ನಿರ್ದೇಶಕ ಜಾರ್ಜ್ ವಿಂಗ್‌ಫೀಲ್ಡ್, ಗಾಜಿನ ಉತ್ಪನ್ನಗಳ ಗುಣಮಟ್ಟ, ಭಾರತದ ಮಾರುಕಟ್ಟೆ ಕುರಿತ ನಿರೀಕ್ಷೆ ಬಗ್ಗೆ ಹೇಳಿಕೊಂಡರು. `ಟಿಟಿಕೆ~ಯ ಶಂಕರನ್ ಮತ್ತು ಚಂದ್ರು ಕಾರ್ಲೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.