ADVERTISEMENT

ಠೇವಣಿ ಪಡೆಯಲು ಪರದಾಟ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಬೆಳಗಾವಿ: ಜಿಲ್ಲೆಯ ಹಲವು ಸಹಕಾರಿ ಸೊಸೈಟಿಗಳು ಒಟ್ಟು ಸುಮಾರು ಒಂಬತ್ತು ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಠೇವಣಿಯನ್ನು ಗ್ರಾಹಕರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದರಿಂದ ಸಾವಿರಾರು ಜನರು ತಮ್ಮ ಹಣವನ್ನು ವಾಪಸ್ ಪಡೆಯಲು ಜಿಲ್ಲಾ ಗ್ರಾಹಕರ ವೇದಿಕೆಗೆ ಅಲೆದಾಡುವಂತಾಗಿದೆ.

ಜಿಲ್ಲೆಯಲ್ಲಿ ಅವಧಿ ಪೂರ್ಣಗೊಂಡರೂ ಠೇವಣಿ ಹಣ ಪಾವತಿಸದ ಸುಮಾರು 80 ವಿವಿಧ ಸಹಕಾರಿ ಸಂಘಗಳ ವಿರುದ್ಧ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರುಗಳು ದಾಖಲಾಗಿದೆ. ಒಂದೂವರೆ ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಠೇವಣಿ ಹಣವನ್ನು ವಾಪಸ್ ಮಾಡಿಲ್ಲ.
 
ಸಕಾಲದಲ್ಲಿ ಸಾಲ ಮರುಪಾವತಿ ಆಗದಿರುವುದರಿಂದ ಠೇವಣಿ ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಹಲವು ಸಹಕಾರಿ ಸಂಘಗಳು ಹೆಚ್ಚಿನ ಬಡ್ಡಿ (ಶೇ 14ರವರೆಗೂ) ನೀಡುವ ಆಮಿಷವೊಡ್ಡಿ ಜನರನ್ನು ಸೆಳೆಯುತ್ತಿವೆ. ಹೆಚ್ಚಿನ ಬಡ್ಡಿ ಆಸೆಯಿಂದ ಜನರೂ ಸಹಕಾರಿ ಸಂಘಗಳಲ್ಲಿ ಠೇವಣಿ ಇಟ್ಟಿದ್ದಾರೆ. ಆದರೆ, ಇದೀಗ ಅವಧಿ ಮುಗಿದರೂ ಹಣವನ್ನು ವಾಪಸ್ ಮಾಡುತ್ತಿಲ್ಲ. ಹೀಗಾಗಿ ಜನರು ತಮ್ಮ ಹಣವನ್ನು ಪಡೆಯಲು ವರ್ಷಗಟ್ಟಲೆ ಜಿಲ್ಲಾ ಗ್ರಾಹಕರ ವೇದಿಕೆ ಕಚೇರಿಗೆ ಅಲೆಯುವಂತಾಗಿದೆ.

ಗ್ರಾಹಕರಿಗೆ ಹಣವನ್ನು ವಾಪಸ್ ನೀಡದಿರುವುದರಲ್ಲಿ ನಿಪ್ಪಾಣಿಯ `ಓಂ ಗಣೇಶ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ~ ಮೊದಲ ಸ್ಥಾನದಲ್ಲಿದೆ. ಇದರ ವಿರುದ್ಧ 150ಕ್ಕೂ ಹೆಚ್ಚು ಜನರು ಗ್ರಾಹಕ ವೇದಿಕೆಗೆ ದೂರು ನೀಡಿದ್ದಾರೆ. ಈ ಸಂಘ ಸುಮಾರು ್ಙ1.25 ಕೋಟಿ ಬಾಕಿ ಉಳಿಸಿಕೊಂಡಿದೆ.

ಬೆಳಗಾವಿಯ ಮಿಲತ್ ವುಮನ್ಸ್ ಸಹಕಾರಿ ಸೊಸೈಟಿಯು 80ಕ್ಕೂ ಹೆಚ್ಚು ಗ್ರಾಹಕರ ಸುಮಾರು ಒಂದು ಕೋಟಿ ರೂಪಾಯಿ, ನಿಪ್ಪಾಣಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯು 70ಕ್ಕೂ ಹೆಚ್ಚು ಜನರ ಸುಮಾರು ್ಙ80 ಲಕ್ಷ ಹಾಗೂ ಯಮಕನಮರಡಿ ಅರ್ಬನ್ ಕೋಆಪರೇಟಿವ್ ಸೊಸೈಟಿಯು 50ಕ್ಕೂ ಹೆಚ್ಚು ಗ್ರಾಹಕರ ಸುಮಾರು ್ಙ50 ಲಕ್ಷ ಠೇವಣಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಭಾರತಿ ಮಹಿಳಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ವಿರುದ್ಧವೂ 50ಕ್ಕೂ ಹೆಚ್ಚು ಗ್ರಾಹಕರು ಹಣ ಕೊಡಿಸುವಂತೆ ವೇದಿಕೆಯ ಮೆಟ್ಟಿಲೇರಿದ್ದಾರೆ.


“ಸೊಸೈಟಿಗಳ ಆಡಳಿತ ಮಂಡಳಿ ಸದಸ್ಯರು ಸಮರ್ಪಕ ದಾಖಲೆಗಳಿಲ್ಲದಿದ್ದರೂ ತಮ್ಮ ಆತ್ಮೀಯರಿಗೆ ಬೃಹತ್ ಮೊತ್ತದ ಸಾಲ ನೀಡುತ್ತಾರೆ. ಅದನ್ನು ಸಕಾಲದಲ್ಲಿ ವಾಪಸ್ ಪಡೆಯದಿರುವುದರಿಂದ ಅವಧಿ ಮುಗಿದರೂ ಗ್ರಾಹಕರ ಠೇವಣಿ ಹಣವನ್ನು ವಾಪಸ್ ನೀಡುತ್ತಿಲ್ಲ. ನನ್ನ ಹಣವನ್ನು ಪಾವತಿಸುವಂತೆ ಮೂರು ತಿಂಗಳ ಹಿಂದೆ ವೇದಿಕೆಯು ಆದೇಶಿಸಿದ್ದರೂ ಸೊಸೈಟಿ ಹಣ ನೀಡುತ್ತಿಲ್ಲ” ಎಂದು ನಿಪ್ಪಾಣಿಯ ಓಂ ಗಣೇಶ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ನಾಲ್ಕು ಲಕ್ಷ ರೂಪಾಯಿ ಠೇವಣಿ ಇಟ್ಟಿರುವ ಗ್ರಾಹಕ ಮಹಾದೇವ ಬಾಳು ಪಾಟೀಲ `ಪ್ರಜಾವಾಣಿ~ ಬಳಿ ಅಳಲು ತೋಡಿಕೊಂಡರು.

ಸಂಘದ ಅಧ್ಯಕ್ಷರಿಗೆ ಶಿಕ್ಷೆ: ಠೇವಣಿಯನ್ನು ಪಾವತಿಸುವಂತೆ ನೀಡಿದ್ದ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲ್ಲೂಕಿನ ಸದಲಗಾದ ರಯತ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಮೂರು  ವರ್ಷ ಜೈಲು ಶಿಕ್ಷೆ ಹಾಗೂ ್ಙ10,000 ದಂಡವನ್ನು ವಿಧಿಸಿ ಗ್ರಾಹಕರ ವೇದಿಕೆ ಅಧ್ಯಕ್ಷ ಎ.ಐ. ಮುನ್ನೋಳಿ ಈಚೆಗೆ ತೀರ್ಪು ನೀಡಿದ್ದಾರೆ.

ಇದೀಗ ನೂರು ಗ್ರಾಹಕರಿಗೆ ಒಟ್ಟು ಸುಮಾರು ್ಙ1 ಕೋಟಿ ಠೇವಣಿ ಹಣವನ್ನು ಏಪ್ರಿಲ್ 10ರ ಒಳಗೆ ಪಾವತಿಸುವಂತೆ `ಓಂ ಗಣೇಶ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ~ಕ್ಕೆ ಗ್ರಾಹಕರ ವೇದಿಕೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.