ADVERTISEMENT

ಡಿಜಿಟಲ್‌ ಕರೆನ್ಸಿ ಮೇಲೆ ನಿಷೇಧ

ಅನಾಮಧೇಯ ವಹಿವಾಟು ತಡೆಗೆ ದಕ್ಷಿಣ ಕೊರಿಯಾ ಸರ್ಕಾರದ ನಿರ್ಧಾರ

ಏಜೆನ್ಸೀಸ್
Published 28 ಡಿಸೆಂಬರ್ 2017, 20:34 IST
Last Updated 28 ಡಿಸೆಂಬರ್ 2017, 20:34 IST
ಡಿಜಿಟಲ್‌ ಕರೆನ್ಸಿ ಮೇಲೆ ನಿಷೇಧ
ಡಿಜಿಟಲ್‌ ಕರೆನ್ಸಿ ಮೇಲೆ ನಿಷೇಧ   

ಸೋಲ್‌: ಕಾನೂನಿನ ನಿಯಂತ್ರಣಕ್ಕೆ ಸಿಗದೆ ಅನಾಮಧೇಯವಾಗಿ  ನಡೆಯುವ ಡಿಜಿಟಲ್‌ ಕರೆನ್ಸಿಗಳ ವಹಿವಾಟಿನ ಮೇಲೆ ನಿಷೇಧ ವಿಧಿಸಲು ದಕ್ಷಿಣ ಕೊರಿಯಾ ಮುಂದಾಗಿದೆ.

ಇಂತಹ ಕರೆನ್ಸಿಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಮತ್ತು ತೀವ್ರ ಏರಿಳಿತದ ಬೆಲೆಗಳು ನೀರುಗುಳ್ಳೆಯಂತಾಗಿ ಆತಂಕ ಸೃಷ್ಟಿಸಿರುವುದರಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ವಿಶ್ವದಾದ್ಯಂತ ನಡೆಯುತ್ತಿರುವ ಕ್ರಿಪ್ಟೊ ಕರೆನ್ಸಿಗಳ ವಹಿವಾಟಿನಲ್ಲಿ ಶೇ 20ರಷ್ಟು ದಕ್ಷಿಣ ಕೊರಿಯಾದಲ್ಲಿಯೇ ನಡೆಯುತ್ತಿದೆ.

ಅನಾಮಧೇಯ ಕ್ರಿಪ್ಟೊ ಕರೆನ್ಸಿಯಲ್ಲಿ ಹೊಸದಾಗಿ ಖಾತೆ ತೆರೆಯುವುದರ ಮೇಲೆ ನಿಷೇಧ ವಿಧಿಸಲಾಗಿದೆ. ಅಗತ್ಯ ಬಿದ್ದರೆ ಇಂತಹ ಕರೆನ್ಸಿಗಳ ವಹಿವಾಟು ನಡೆಸುವ ವಿನಿಮಯ ಕೇಂದ್ರಗಳನ್ನು ಮುಚ್ಚಲು ನಿಯಂತ್ರಣ ಸಂಸ್ಥೆಗಳಿಗೆ ಅಧಿಕಾರ ನೀಡುವ ಹೊಸ ಕಾಯ್ದೆಯನ್ನೂ ಜಾರಿಗೆ ತರಲಾಗುತ್ತಿದೆ.

ADVERTISEMENT

ಈ ಕರೆನ್ಸಿಗಳ ವಹಿವಾಟು ಅಸಾಮಾನ್ಯ ಊಹಾತ್ಮಕ ಬಗೆಯಲ್ಲಿ ನಡೆಯುತ್ತಿದೆ. ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಎಲ್ಲ ಅನಾಮಧೇಯ ಖಾತೆಗಳನ್ನು ಮುಂದಿನ ತಿಂಗಳು ಸ್ಥಗಿತಗೊಳಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ವಹಿವಾಟು ಮತ್ತು ಹಣಕಾಸು ವಂಚನೆಗಳಿಗೆ ಕಡಿವಾಣ ಹಾಕುವ, ಬೆಲೆ ಏರಿಳಿತದಲ್ಲಿ ಕೈಚೆಳಕ ತೋರುವುದನ್ನು ನಿಯಂತ್ರಿಸಲೂ ಸರ್ಕಾರ ಉದ್ದೇಶಿಸಿದೆ.

ಸೈಬರ್ ದಾಳಿಯಲ್ಲಿ ಶೇ 17ರಷ್ಟು ಬಿಟ್‌ಕಾಯಿನ್‌ ಕದ್ದ ಘಟನೆ ನಡೆದ ನಂತರ ಇಲ್ಲಿಯ ಯೂಬಟ್‌ (Youbut) ವಿನಿಮಯ ಕೇಂದ್ರ ಕಳೆದ ವಾರವೇ ಬಾಗಿಲು ಹಾಕಿದೆ.

**

10 ಲಕ್ಷ: ದಕ್ಷಿಣ ಕೊರಿಯಾದಲ್ಲಿ ಬಿಟ್‌ಕಾಯಿನ್‌ ಹೊಂದಿದ ಸಣ್ಣ ಹೂಡಿಕೆದಾರರು

20%: ಅಮೆರಿಕದಲ್ಲಿನ ಬೆಲೆಗಿಂತ ಹೆಚ್ಚಿನ ಬೆಲೆ ನಿಗದಿ

17 %: ಯೂಬಟ್‌ ಷೇರುಪೇಟೆಯಲ್ಲಿ ಕದ್ದ ಬಿಟ್‌ಕಾಯಿನ್‌  ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.