ನವದೆಹಲಿ (ಪಿಟಿಐ): ಉಭಯ ದೇಶಗಳ ಬಂಡವಾಳ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸುವ ಸಲುವಾಗಿ, ಎರಡೂ ಕಡೆ ತೆರಿಗೆ ಪಾವತಿಸುವುದನ್ನು ತಪ್ಪಿಸುವ ಒಪ್ಪಂದ(ಡಬಲ್ ಟ್ಯಾಕ್ಸೇಷನ್ ಅವಾಯ್ಡೆನ್ಸ್ ಅಗ್ರಿಮೆಂಟ್-ಡಿಟಿಎಎ)ದಲ್ಲಿ ಬದಲಾವಣೆ ತರುವ ಪ್ರಕ್ರಿಯೆ ಚುರುಕುಗೊಳಿಸುವಂತೆ ಕೊಲಂಬಿಯಾವನ್ನು ಭಾರತ ಕೋರಿದೆ.
ಸದ್ಯ ಕೊಲಂಬಿಯಾ ಪ್ರವಾಸದಲ್ಲಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ನಿಯೋಗ ಅಲ್ಲಿನ ಸರ್ಕಾರಕ್ಕೆ ಈ ಕೋರಿಕೆ ಸಲ್ಲಿಸಿದ್ದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ.
ಕೊಲಂಬಿಯಾದ ವಾಣಿಜ್ಯ ಖಾತೆ ಉಪ ಸಚಿವ ಕಾರ್ಲೋಸ್ ಡೆ ಹರ್ಟ್ ಸಹ ತಮ್ಮ ದೇಶದ ಸಂಸತ್ತು `ಡಿಟಿಎಎ~ ಬದಲಾವಣೆ ಕುರಿತು ಈ ವರ್ಷಾಂತ್ಯದೊಳಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ತಿಳಿಸಿದರು ಎಂದೂ ಪ್ರಕಟಣೆ ತಿಳಿಸಿದೆ.
ಕೊಲಂಬಿಯಾ, ವೆನೆಜುವೆಲಾ ಮತ್ತು ಕ್ಯೂಬಾ ಜತೆಗಿನ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ ಭಾರತೀಯ ವಾಣಿಜ್ಯೋದ್ಯಮಿಗಳ ನಿಯೋಗ ಮೂರೂ ದೇಶಗಳ ಪ್ರವಾಸ ಹಮ್ಮಿಕೊಂಡಿದೆ.
ಭಾರತೀಯ ಉದ್ಯಮಗಳ ಒಕ್ಕೂಟ(ಸಿಐಐ) ಸಹಭಾಗಿತ್ವದ ಈ ವಾಣಿಜ್ಯ ಪ್ರವಾಸ ಎಂಟು ದಿನಗಳ ಅವಧಿಯದಾಗಿದೆ. ಎಲ್ ಅಂಡ್ ಟಿ, ಗೋದ್ರೆಜ್, ಮಹೀಂದ್ರಾ-ಮಹೀಂದ್ರಾ, ಒಎನ್‌ಜಿಸಿ ವಿದೇಶ ಮತ್ತು ಅಪೊಲೊ ಇಂಟರ್‌ನ್ಯಾಷನಲ್ ಕಂಪೆನಿಯ ಪ್ರತಿನಿಧಿಗಳು ಸೇರಿದಂತೆ 25 ಉದ್ಯಮಿಗಳು ತಂಡದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.