ADVERTISEMENT

`ಡಿಟಿಎಚ್' ಮಾರುಕಟ್ಟೆ 3ಪಟ್ಟು ಪ್ರಗತಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST

ನವದೆಹಲಿ(ಪಿಟಿಐ): ಭಾರತದ `ಡಿಟಿಎಚ್'(ಉಪಗ್ರಹದಿಂದ ನೇರ ಮನೆಗೆ ಟಿವಿ ಪ್ರಸಾರ) ಮಾರುಕಟ್ಟೆಯ ಒಟ್ಟಾರೆ ವರಮಾನ 2020ರ ವೇಳೆಗೆ ಮೂರು ಪಟ್ಟು ಹೆಚ್ಚಲಿದ್ದು, 500 ಕೋಟಿ ಡಾಲರ್ (ರೂ27,000 ಕೋಟಿ) ಗಡಿ ದಾಟಲಿದೆ ಎಂದು ಹಾಂಕಾಂಗ್ ಮೂಲದ ಮಾರುಕಟ್ಟೆ ಅಧ್ಯಯನ ಸಂಸ್ಥೆಯೊಂದು ಹೇಳಿದೆ.

ಭಾರತದಲ್ಲಿ ಕೇಬಲ್ ಟಿ.ವಿ ಡಿಜಿಟಲೈಜೇಷನ್ ಕಡ್ಡಾಯ ಮಾಡಿರುವುದರಿಂದ `ಡಿಟಿಎಚ್' ಚಂದಾದಾರರ ಸಂಖ್ಯೆ ಹೆಚ್ಚಲಿದೆ. ಸದ್ಯ 324 ಕೋಟಿಯಷ್ಟಿರುವ ಚಂದಾದಾರರ ಸಂಖ್ಯೆ 2020ರ ವೇಳೆಗೆ  766 ಕೋಟಿಗೆ ಹೆಚ್ಚಲಿದೆ ಎಂದು ಈ ಅಧ್ಯಯನ ನಡೆಸಿದ `ಮೀಡಿಯಾ ಪಾಟ್ನರ್ಸ್ ಏಷ್ಯಾ' ಸಂಸ್ಥೆ ಹೇಳಿದೆ.

ಸದ್ಯ ಟಿವಿ ವಾಹಿನಿಗಳು ಸಕ್ರಿಯ ಚಂದಾದಾರರ ಸಂಖ್ಯೆ ಆಧರಿಸಿ `ಡಿಟಿಎಚ್' ಸೇವಾ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿವೆ. ಈ ಸ್ಥಿರ ದರದ ಬದಲಿಗೆ ಪ್ರತಿ ಚಂದಾದಾರರ ವೆಚ್ಚ ಪರಿಗಣಿಸಿ ಒಪ್ಪಂದ ನವೀಕರಿಸಬೇಕು ಎಂದು ಕೆಲವು ಸಂಸ್ಥೆಗಳು ಒತ್ತಾಯಿಸಿವೆ.

ಈಗಾಗಲೇ ಕೆಲವು ಸಂಸ್ಥೆಗಳು ಒಪ್ಪಂದವನ್ನೂ ಮಾಡಿಕೊಂಡಿವೆ. ಇದರಿಂದ  ಚಂದಾದಾರರಿಂದ ಬರುವ ವರಮಾನ ಹೆಚ್ಚಲಿದೆ. ಕೆಲವು `ಡಿಟಿಎಚ್' ಸಂಸ್ಥೆಗಳು ವೆಚ್ಚ ತಗ್ಗಿಸಲು ಹೊಸ ಚಂದಾದಾರರಿಗೆ ನೀಡುವ ಉಚಿತ ವೀಕ್ಷಣೆ ಅವಧಿ ಕಡಿತ ಮಾಡಿವೆ.

2012ನೇ ಸಾಲಿನಲ್ಲಿ ಹೊಸದಾಗಿ 37 ಲಕ್ಷ `ಡಿಟಿಎಚ್' ಚಂದಾದಾರರು ಸೇರ್ಪಡೆಯಾಗಿದ್ದು, ಒಟ್ಟಾರೆ ಸಕ್ರಿಯ ಚಂದಾದಾರರ ಸಂಖ್ಯೆ 324 ಕೋಟಿಗೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT